ಸಿಎಎ ವಿರೋಧಿ ಪ್ರತಿಭಟನೆ ವೇಳೆ ಭಾಷಣ; ಅಸ್ಸಾಮೀ ಹೋರಾಟಗಾರ ಅಖಿಲ್ ಗೊಗೊಯ್ ಅವರಿಗೆ ಒಂದು ಪ್ರಕರಣದಲ್ಲಿ ಜಾಮೀನು

ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಗೊಗೊಯ್ ಮಾಡಿದ ಭಾಷಣಗಳು ಮೇಲ್ನೋಟಕ್ಕೆ ಪ್ರಚೋದನಕಾರಿ ಮತ್ತು ಆಕ್ರಮಣಕಾರಿ ಸ್ವರೂಪದ್ದಾಗಿದ್ದರೂ, ಅವರು ನೇರವಾಗಿ ಯಾವುದೇ ಹಿಂಸಾಚಾರ ಪ್ರಚೋದಿಸಿರಲಿಲ್ಲ ಎಂದು ಕೋರ್ಟ್ ತಿಳಿಸಿದೆ.
ಅಖಿಲ್ ಗೊಗೊಯ್
ಅಖಿಲ್ ಗೊಗೊಯ್ಫೇಸ್ ಬುಕ್

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಚಬುವಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಮಿ ಹೋರಾಟಗಾರ ಅಖಿಲ್ ಗೊಗೊಯ್ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಮತ್ತೊಂದು ಪ್ರಕರಣ ಗುವಾಹಟಿ ಹೈಕೋರ್ಟಿನಲ್ಲಿದ್ದು ಅಕ್ಟೋಬರ್ 13ರಂದು ವಿಚಾರಣೆ ನಡೆಯಲಿದೆ.

30,000 ರೂ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಜಾಮೀನು ಆಧಾರದ ಮೇಲೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು, ವಿಚಾರಣೆಯ ಸಮಯದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು, ಸಾಕ್ಷಿಯನ್ನು ಬೆದರಿಸಬಾರದು ಅಥವಾ ಪ್ರಭಾವಿಸಬಾರದು ಅಥವಾ ಪೂರ್ವ ಅನುಮತಿಯಿಲ್ಲದೆ ದೇಶ ತೊರೆಯಬಾರದು ಎಂದು ನ್ಯಾಯಾಲಯ ಗೊಗೊಯ್‌ ಅವರಿಗೆ ನಿರ್ದೇಶನ ನೀಡಿದೆ.

Also Read
ಸಿಎಎ ವಿರೋಧಿ ಪ್ರತಿಭಟನೆ: ಮಂಗಳೂರು ಗಲಭೆಯ ಆಪಾದನೆ ಹೊರಿಸಲಾದ 21 ಮಂದಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
Also Read
ಚುನಾಯಿತ ಸರ್ಕಾರ ಉರುಳಿಸಲು ಸಿಎಎ ವಿರೋಧಿ ಪ್ರತಿಭಟನೆ; ದೆಹಲಿ ಪೊಲೀಸರಿಂದ 2,600+ ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಮಾರಕವಾಗುವ ಅಥವಾ ಹಿಂಸಾಚಾರ ಪ್ರಚೋದಿಸುವ ಯಾವುದೇ ಚಟುವಟಿಕೆಗಳಲ್ಲಿ ಗೊಗೊಯ್ ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ.

ಪ್ರಕರಣ 2019ರ ಡಿಸೆಂಬರ್ 9ರಂದು ಅಸ್ಸಾಂನ ಚಬುವಾದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗೊಗೊಯ್ ಅವರು ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದರು.

ಗೊಗೊಯ್ ಮಾಡಿದ ಭಾಷಣಗಳು ಮೇಲ್ನೋಟಕ್ಕೆ ಪ್ರಚೋದನಕಾರಿ ಮತ್ತು ಆಕ್ರಮಣಕಾರಿ ಸ್ವರೂಪದ್ದಾಗಿದ್ದರೂ, ಅವರು ನೇರವಾಗಿ ಯಾವುದೇ ಹಿಂಸಾಚಾರ ಪ್ರಚೋದಿಸಿರಲಿಲ್ಲ ಎಂದು ಕೋರ್ಟ್ ತಿಳಿಸಿದೆ. ಹೀಗೆ ಹೇಳಿದ ಬಳಿಕ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಾರಣವಾದ ಪ್ರತಿಭಟನಾಕಾರರನ್ನು ತಡೆಯಲು ಗೊಗೊಯ್ ಏನನ್ನೂ ಮಾಡಲಿಲ್ಲ ಎಂದು ಕೂಡ ನ್ಯಾಯಾಲಯ ದಾಖಲಿಸಿದೆ.

ಗೊಗೊಯ್ ಅವರ ಕೃತ್ಯಗಳು ಅಥವಾ ಲೋಪಗಳು ಯುಎಪಿಎ ಸೆಕ್ಷನ್ 15ರ ಅಡಿಯಲ್ಲಿ ಭಯೋತ್ಪಾದನೆ ಕೃತ್ಯದ ವ್ಯಾಪ್ತಿಗೆ ಬರುತ್ತವೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿತ್ತು. ಮೇಲ್ನೋಟಕ್ಕೆ ಇವುಗಳನ್ನು ಭಯೋತ್ಪಾದಕ ಕೃತ್ಯಗಳು ಎಂದು ಹೇಳಲಾಗದು ಎಂಬುದಾಗಿ ಕೋರ್ಟ್ ತೀರ್ಮಾನಿಸಿತು.

... ಲಭ್ಯ ದಾಖಲೆಗಳ ಪ್ರಕಾರ ಗೊಗೊಯ್ ಅವರದ್ದು ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ ಹಾಗೂ ಭದ್ರತೆಗೆ ಬೆದರಿಕೆ ಹಾಕುವ ಉದ್ದೇಶದಿಂದ ಅಥವಾ ಉಗ್ರಗಾಮಿ ಕೃತ್ಯ ಎಂದು ಕರೆಯಲಾಗುವ ಜನರೊಳಗೆ ಭೀತಿ ಹುಟ್ಟಿಸುವ ಭಯೋತ್ಪಾದಕ ಕೆಲಸ ಎಂದು ಹೇಳಲಾಗದು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ

ಇದಲ್ಲದೆ, ಆರೋಪಪಟ್ಟಿ ಸಲ್ಲಿಸಿದ ಬಳಿಕ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಗೊಗೊಯ್ ಅವರು ಈಗಾಗಲೇ ಹಲವಾರು ತಿಂಗಳುಗಳ ಕಾಲ ಬಂಧನದಲ್ಲಿದ್ದಾರೆ ಮತ್ತು ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೋರ್ಟಿಗೆ ತಿಳಿಸಲಾಯಿತು.

ಈ ಎಲ್ಲ ಅಂಶಗಳನ್ನು ಆಧರಿಸಿ, ನ್ಯಾಯಾಲಯವು ಈ ನಿರ್ದಿಷ್ಟ ಪ್ರಕರಣದಲ್ಲಿ "ನ್ಯಾಯದ ಹಿತದೃಷ್ಟಿಯಿಂದ" ಗೊಗೊಯ್ ಅವರಿಗೆ ಜಾಮೀನು ನೀಡಿತು.

ಚಂದಮರಿ ಪೊಲೀಸ್ ಠಾಣೆ ತನ್ನ ವಿರುದ್ಧ ದಾಖಲಾಗಿರುವ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಗೊಯ್ ಅವರ ಜಾಮೀನು ಅರ್ಜಿಯನ್ನು ವಿಶೇಷ ಎನ್ಐಎ ನ್ಯಾಯಾಲಯ ತಿರಸ್ಕರಿಸಿದೆ ಎಂಬುದನ್ನು ಗಮನಿಸಬೇಕು. ಈ ಪ್ರಕರಣದ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಗುವಾಹಟಿ ಹೈಕೋರ್ಟ್ ಒಪ್ಪಿಗೆ ಸೂಚಿಸಿದ್ದು ಅಕ್ಟೋಬರ್ 13ರಂದು ವಿಚಾರಣೆ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com