

2015ರಲ್ಲಿ ಗೋಹತ್ಯೆ ಮತ್ತು ಗೋಮಾಂಸ ಸೇವನೆ ಶಂಕೆ ಆಧಾರದಲ್ಲಿ ಉತ್ತರ ಪ್ರದೇಶದ ಮುಸ್ಲಿಂ ನಾಗರಿಕ ಮೊಹಮ್ಮದ್ ಅಖ್ಲಾಕ್ ಅವರನ್ನು ಕೊಲೆ ಮಾಡಿದ ಆರೋಪಿಗಳ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ಹಿಂಪಡೆಯಲು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನೋಯ್ಡಾದ ವಿಚಾರಣಾ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ದ್ವಿವೇದಿ ಅವರು , ಪ್ರಕರಣದಲ್ಲಿ ಈಗಾಗಲೇ ಆರೋಪ ಹೊರಿಸಲಾಗಿದ್ದು, ಸಾಕ್ಷಿಗಳು ಪೊಲೀಸರಿಗೆ ನೀಡಿರುವ ಹೇಳಿಕೆಗಳು ಪ್ರಾಸಿಕ್ಯೂಷನ್ ವಾದವನ್ನು ಸಮರ್ಥಿಸಿದೆ ಎಂದರ
ಪೊಲೀಸರೆದುರು ದಾಖಲಿಸಲಾದ ಸಾಕ್ಷಿಗಳ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ ಎಂಬ ರಾಜ್ಯ ಸರ್ಕಾರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.
ಪೊಲೀಸರಿಗೆ ನೀಡಲಾದ ಹೇಳಿಕೆಗಳ ಪರಿಶೀಲನೆ ಪ್ರಾಸಿಕ್ಯೂಷನ್ ವಾದವನ್ನು ರದ್ದುಗೊಳಿಸಲಾಗಿದೆ ಎಂದು ಸೂಚಿಸುವುದಿಲ್ಲ. ಬದಲಾಗಿ, ಘಟನೆಗಳ ಕುರಿತು ಪ್ರಾಸಿಕ್ಯೂಷನ್ ವಾದವನ್ನು ಸಾಕ್ಷ್ಯಗಳು ಬೆಂಬಲಿಸುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬೇರೆ ಬೇರೆ ಸಾಕ್ಷಿಗಳು ಬೇರೆ ಬೇರೆ ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಿದ್ದಾರೆ ಎಂದು ಸರ್ಕಾರ ವಾದಿಸಿತ್ತು.
ಆದರೂ, ಪೊಲೀಸರು ಹೇಳಿಕೆಗಳನ್ನು ದಾಖಲಿಸುವ ಹಂತದಲ್ಲಿ ಆರೋಪಿಗಳ ಸಂಖ್ಯೆ "ಹೆಚ್ಚು ಅಥವಾ ಕಡಿಮೆ" ಎಂಬುದು ಮುಖ್ಯವಲ್ಲ ಎಂದು ನ್ಯಾಯಾಲಯ ಹೇಳಿತು.
ಕೊಲೆಯಂತಹ ಗಂಭೀರ ಅಪರಾಧ ಸಮಾಜದ ವಿರುದ್ಧದ ಅಪರಾಧ ಎಂದ ನ್ಯಾಯಾಲಯ, ಮೊಕದ್ದಮೆಯನ್ನು ಹಿಂಪಡೆಯಲು ಸರ್ಕಾರದ ಅರ್ಜಿಯಲ್ಲಿ ಹುರುಳಿಲ್ಲ ಎಂದು ಹೇಳಿದೆ.
"ಕೊಲೆ ಸಮಾಜದ ವಿರುದ್ಧದ ಗಂಭೀರ ಅಪರಾಧವಾಗಿದ್ದು, ಈ ಕಾರಣಕ್ಕಾಗಿ, ಸಮಾಜದಲ್ಲಿ ಕಾನೂನಿನ ಭಯ ಇರುವಂತೆ ಮಾಡಲು ರಾಜ್ಯ ಸರ್ಕಾರ ಅಂತಹ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಬೇಕು" ಎಂದು ನ್ಯಾಯಾಧೀಶರು ಹೇಳಿದರು.