
ಬಂಗಾಳಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ದೆಹಲಿಯಲ್ಲಿ ವಾಸವಿರುವ ಜನರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುತ್ತಿರುವುದು ಆತಂಕಕಾರಿ ಎಂದು ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದೆ [ಭೋದು ಶೇಖ್ ಮತ್ತು ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಬಂಗಾಳಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ದೆಹಲಿ ಪೊಲೀಸರು ಯಾವುದೇ ವ್ಯಕ್ತಿಗಳನ್ನು ಬಂಧಿಸುವಂತಿಲ್ಲ ಎಂದು ಪ. ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ಅವರು ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ರೀತೊಬ್ರೊತೊ ಕುಮಾರ್ ಮಿತ್ರ ಅವರಿದ್ದ ವಿಭಾಗೀಯ ಪೀಠದ ಮುಂದೆ ವಾದಿಸಿದರು.
"ಇದು (ಪ್ರಸ್ತುತ ಪ್ರಕರಣ) ಬೀರ್‌ಭೂಮ್ ಜಿಲ್ಲೆಯ ಕುಟುಂಬ... ಯಾರನ್ನಾದರೂ ಬಾಂಗ್ಲಾದೇಶಿಗ ಎಂಬುದನ್ನು ನಿರ್ಧರಿಸಬೇಕಾದವರು ಯಾರು? ಪೊಲೀಸರಲ್ಲ, ಆದರೆ ಸಂಬಂಧಪಟ್ಟ ಅಧಿಕಾರಿಗಳು... ಈ ಎಲ್ಲಾ ಪ್ರಕರಣಗಳ ವರದಿಗಳನ್ನು ನಾನು ಪರಿಶೀಲಿಸಿದ್ದೇನೆ, ಇದು ತುಂಬಾ ಆತಂಕಕಾರಿ” ಎಂದು ಅವರು ಹೇಳಿದರು.
ಕಳೆದ ತಿಂಗಳು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾದ ಬೀರ್‌ಭೂಮ್ ವಲಸಿಗರ ಕುಟುಂಬ ಸದಸ್ಯರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಬಾಂಗ್ಲಾದೇಶಕ್ಕೆ ಎಷ್ಟು ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಬೇಕೆಂದು ಬಂಡೋಪಾಧ್ಯಾಯ ಒತ್ತಾಯಿಸಿದರು.
ಬಂಡೋಪಾಧ್ಯಾಯ ಅವರ ಹೇಳಿಕೆಗೆ ಆಕ್ಷೇಪಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಬಂಗಾಳಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಯನ್ನು ಗಡೀಪಾರು ಮಾಡಲಾಗಿಲ್ಲ ಎಂದು ಹೇಳಿದರು.
ಗಡೀಪಾರಾದ ಕುಟುಂಬ ಸದಸ್ಯರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಆ ಸಂಗತಿಯನ್ನು ಇಲ್ಲಿ ಮರೆಮಾಚಲಾಗಿದೆ ಎಂದು ಅವರು ಹೇಳಿದರು.
ಮಾಹಿತಿ ಮರೆಮಾಚಿದ್ದಕ್ಕಾಗಿ ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠ, ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿತು. "ನಮ್ಮ ಮೇಲೆ ತಂತ್ರ ಹೂಡಬೇಡಿ" ಎಂದು ಅದು ಗರಂ ಆಯಿತು.
ಅಂತಿಮವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿದ ಅದು ಪ್ರಕರಣ ಮುಂದೂಡಿತು.