
ವೈವಾಹಿಕ ವ್ಯಾಜ್ಯ ಪ್ರಕರಣಗಳಲ್ಲಿ ಸಂಗಾತಿಯು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸ್ವತಂತ್ರರಾಗಿದ್ದರೆ ಆತ ಅಥವಾ ಆಕೆಗೆ ಜೀವನಾಂಶ ಪರಿಹಾರವನ್ನು ನೀಡಲಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ವಿಭಾಗೀಯ ಪೀಠವು, ಶಾಶ್ವತ ಜೀವನಾಂಶವನ್ನು ಸಾಮಾಜಿಕ ನ್ಯಾಯದ ತತ್ವದಿಂದ ನೋಡಲಾಗಿದೆಯೇ ಹೊರತು ಅದನ್ನು ಇಬ್ಬರು ಸಮರ್ಥ ವ್ಯಕ್ತಿಗಳ ನಡುವೆ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಅಥವಾ ಸಮಾನವಾಗಿಸುವ ಸಾಧನವಾಗಿ ಅಲ್ಲ ಎಂದು ಹೇಳಿದೆ. ಜೀವನಾಂಶವನ್ನು ಬಯಸುವ ವ್ಯಕ್ತಿಯು ಹಣಕಾಸಿನ ನೆರವಿನ ನಿಜವಾದ ಅಗತ್ಯವನ್ನು ನಿರೂಪಿಸುವುದು ಕಾನೂನಿನ ಪ್ರಕಾರ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
"[ಹಿಂದೂ ವಿವಾಹ ಕಾಯ್ದೆಯ (ಎಚ್‌ಎಂಎ) ಸೆಕ್ಷನ್ 25] ಅಡಿಯಲ್ಲಿ ಜೀವನಾಂಶವನ್ನು ನೀಡುವ ವಿಚಾರದಲ್ಲಿ ನ್ಯಾಯಾಂಗದ ವಿವೇಚನೆಯನ್ನು ಅರ್ಜಿದಾರನು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸ್ವತಂತ್ರನಾಗಿದ್ದರೆ ಬಳಸಲಾಗುವುದಿಲ್ಲ. ಅಲ್ಲದೆ, ಅಂತಹ ವಿವೇಚನೆಯನ್ನು ದಾಖಲೆಗಳು, ಪಕ್ಷಕಾರರ ಸಾಪೇಕ್ಷ ಆರ್ಥಿಕ ಸಾಮರ್ಥ್ಯಗಳು ಮತ್ತು ಮೇಲ್ಮನವಿದಾರನ ಕಡೆಯಿಂದ ಆರ್ಥಿಕ ದೌರ್ಬಲ್ಯವನ್ನು ಪ್ರದರ್ಶಿಸುವ ಯಾವುದೇ ಆಧಾರಗಳ ಅನುಪಸ್ಥಿತಿಯ ಸಂದರ್ಭದಲ್ಲಿ ಸೂಕ್ತವಾಗಿ ಮತ್ತು ವಿವೇಚನೆಯಿಂದ ಬಳಸಬೇಕು" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಮಹಿಳೆಗೆ ಶಾಶ್ವತ ಜೀವನಾಂಶ ನಿರಾಕರಿಸಿ, ಕ್ರೌರ್ಯದ ಆಧಾರದ ಮೇಲೆ ಆಕೆಯ ಪತಿಗೆ ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಜನವರಿ 2010 ರಲ್ಲಿ ವಿವಾಹವಾಗಿದ್ದ ದಂಪತಿ, 14 ತಿಂಗಳೊಳಗೆ ಬೇರ್ಪಟ್ಟು ವಿಚ್ಛೇದನ ಪಡೆದಿದ್ದರು. ಪತಿ ವೃತ್ತಿಪರ ವಕೀಲರಾಗಿದ್ದರು ಮತ್ತು ಪತ್ನಿ ಗ್ರೂಪ್ ಎ ಇಂಡಿಯನ್ ರೈಲ್ವೆ ಸಂಚಾರ ಸೇವೆ (ಐಆರ್‌ಟಿಎಸ್) ಅಧಿಕಾರಿಯಾಗಿದ್ದರು.
ಪತಿಯು ಪತ್ನಿಯಿಂದ ತಮಗೆ ಮಾನಸಿಕ ಮತ್ತು ದೈಹಿಕ ಕ್ರೌರ್ಯವನ್ನು ಆರೋಪಿಸಿದ್ದರು. ಇದರಲ್ಲಿ ನಿಂದನೀಯ ಭಾಷೆ, ಅವಮಾನಕರ ಸಂದೇಶಗಳು, ವೈವಾಹಿಕ ಹಕ್ಕುಗಳ ನಿರಾಕರಣೆ ಮತ್ತು ವೃತ್ತಿಪರ ಮತ್ತು ಸಾಮಾಜಿಕವಾಗಿ ಮಾಡಿದ ಅವಮಾನ ಸೇರಿತ್ತು. ಈ ಆರೋಪಗಳನ್ನು ನಿರಾಕರಿಸಿದ್ದ ಪತ್ನಿಯು ಪತಿಯ ವಿರುದ್ಧ ಕ್ರೌರ್ಯದ ಪ್ರತಿ-ಆರೋಪ ಮಾಡಿದ್ದರು. ಅಂತಿಮವಾಗಿ ಕೌಟುಂಬಿಕ ನ್ಯಾಯಾಲಯವು ಮದುವೆಯನ್ನು ವಿಸರ್ಜಿಸಿತ್ತು.
ಆದರೆ, ಇದೇ ವೇಳೆ ಕೌಟುಂಬಿಕ ನ್ಯಾಯಾಲಯವು ಮದುವೆಯನ್ನು ವಿಸರ್ಜನೆಯನ್ನು ಒಪ್ಪಿಕೊಳ್ಳಲು ಪತ್ನಿಯು ₹50 ಲಕ್ಷಗಳ ಆರ್ಥಿಕ ಪರಿಹಾರದ ಬೇಡಿಕೆ ಇಟ್ಟಿದ್ದನ್ನು ದಾಖಲಿಸಿತ್ತು. ಆದರೆ, ಆ ಬೇಡಿಕೆಯನ್ನು ಅನುಮತಿಸಿರಲಿಲ್ಲ. ಕೌಟುಂಬಿಕ ನ್ಯಾಯಾಲಯದ ಈ ಆದೇಶದ ವಿರುದ್ಧ ಪ್ರಕರಣವನ್ನು ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿ ಆಲಿಸಿದ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದು ಆದೇಶವನ್ನು ಎತ್ತಿಹಿಡಿಯಿತು.