ಹೇಮಾ ಸಮಿತಿ ವರದಿಯ ಎಲ್ಲಾ 35 ಲೈಂಗಿಕ ಕಿರುಕುಳ ಪ್ರಕರಣ ಕೈಬಿಡಲಾಗಿದೆ: ಕೇರಳ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

ಪ್ರಕರಣದ ಸಂತ್ರಸ್ತರು ಹೇಳಿಕೆ ನೀಡಲು ಮುಂದೆ ಬಾರದ ಕಾರಣ, ಎಸ್ಐಟಿ ಆರಂಭಿಸಿದ್ದ ಎಲ್ಲಾ 35 ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕಾಯಿತು ಎಂದು ಕೇರಳ ಸರ್ಕಾರ ಹೇಳಿದೆ.
Kerala High Court with Justice Hema Committee Report
Kerala High Court with Justice Hema Committee Report
Published on

ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಎಲ್ಲಾ 35 ಲೈಂಗಿಕ ಕಿರುಕುಳ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಕೇರಳ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ [ನವಾಸ್ ಎ ಅಲಿಯಾಸ್‌ ಪೈಚಿರಾ ನವಾಸ್ ಮತ್ತು ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಪ್ರಕರಣಗಳು].

ಪ್ರಕರಣದ ಸಂತ್ರಸ್ತರು ಹೇಳಿಕೆ ನೀಡಲು ಮುಂದೆ ಬಾರದ ಕಾರಣ, ಎಸ್ಐಟಿ ಆರಂಭಿಸಿದ್ದ ಎಲ್ಲಾ 35 ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕಿದೆ ಎಂದು ರಾಜ್ಯ ಸರ್ಕಾರ ಈ ಪ್ರಕರಣಗಳ ತನಿಖೆಗೆಂದೇ ನೇಮಕಗೊಂಡಿದ್ದ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಸಿ ಎಸ್ ಸುಧಾ ಅವರಿದ್ದ ವಿಶೇಷ ಪೀಠಕ್ಕೆ ತಿಳಿಸಿತು. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

Also Read
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಅಸಮಾನತೆ: ಇಲ್ಲಿವೆ ನ್ಯಾ. ಹೇಮಾ ಸಮಿತಿ ವರದಿಯ ಪ್ರಮುಖ ಅಂಶಗಳು

" ನಾವು ಯಾರನ್ನೂ ಒತ್ತಾಯಿಸಲು ಬಯಸುವುದಿಲ್ಲ " ಎಂದು ನ್ಯಾಯಮೂರ್ತಿ ನಂಬಿಯಾರ್ ಪ್ರತಿಕ್ರಿಯಿಸಿದರು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು 'ವಿಮೆನ್ ಇನ್ ಸಿನಿಮಾ ಕಲೆಕ್ಟಿವ್' ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಕೇರಳ ಸರ್ಕಾರ 2017ರಲ್ಲಿ ನ್ಯಾಯಮೂರ್ತಿ ಕೆ ಹೇಮಾ ಸಮಿತಿ ರಚಿಸಿತ್ತು.

Also Read
ನ್ಯಾ. ಹೇಮಾ ಸಮಿತಿ ವರದಿ ಕುರಿತು ರಾಜ್ಯ ಸರ್ಕಾರದ ನಿಷ್ಕ್ರಿಯತೆ ದಿಗ್ಭ್ರಮೆ ಮೂಡಿಸಿದೆ: ಕೇರಳ ಹೈಕೋರ್ಟ್ ಕಿಡಿ

ಆಗಸ್ಟ್ 2024 ರಲ್ಲಿ ಬಿಡುಗಡೆಯಾದ ವರದಿ ಚಿತ್ರೋದ್ಯಮದಲ್ಲಿ ವ್ಯಾಪಕವಾಗಿರುವ ಲೈಂಗಿಕ ದೌರ್ಜನ್ಯ ಮತ್ತು ʼಪಾತ್ರಕ್ಕಾಗಿ ಪಲ್ಲಂಗʼ ರೂಢಿಯಲ್ಲಿರುವುದನ್ನು ಬಹಿರಂಗಪಡಿಸಿತ್ತು.  ಇದರ ಪರಿಣಾಮ ಕ್ರಿಮಿನಲ್‌ ಪ್ರಕರಣಗಳು ದಾಖಲಾದವು. ಈ ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು.

ಕೆಲ ದಿನಗಳ ಹಿಂದೆ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಚಿತ್ರೋದ್ಯಮದ ಸಮಸ್ಯೆ ಬಗೆಹರಿಸಲು ಪ್ರಸ್ತಾಪಿಸಲಾಗಿದ್ದ ಮಸೂದೆಯ ಸ್ಥಿತಿಗತಿ ಬಗ್ಗೆ ಅಡ್ವೊಕೇಟ್‌ ಜನರಲ್‌ ಗೋಪಾಲಕೃಷ್ಣ ಕುರುಪ್‌ ಅವರನ್ನು ಪ್ರಶ್ನಿಸಿತ್ತು. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯಿದೆಯ (ಪೋಶ್‌ ಕಾಯಿದೆ) ಅಂಶಗಳನ್ನೇ ಎತ್ತಿ ಹೊಸ ಕಾಯಿದೆಯಲ್ಲಿ ಸೇರಿಸಬಾರದು ಎಂದು ನ್ಯಾಯಾಲಯ ಈ ವೇಳೆ ಎಚ್ಚರಿಕೆ ನೀಡಿತ್ತು.  ಕಾಯಿದೆಯ ಕರಡನ್ನು ಅಂತಿಮಗೊಳಿಸುವ ಮೊದಲು, ಆಗಸ್ಟ್ 2025ರಲ್ಲಿ ಚಿತ್ರರಂಗದ ಸಭೆ ಕರೆಯುವುದಾಗಿ ಕುರುಪ್‌ ಆ ವೇಳೆ ತಿಳಿಸಿದ್ದರು. ಸಭೆಯ ಬಳಿಕ ಮತ್ತೆ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com