ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಉಳಿಸಲು ವಿಶ್ವದ ಜನರೆಲ್ಲಾ ದಣಿವರಿಯದೆ ಶ್ರಮಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಶನಿವಾರ ಕರೆ ನೀಡಿದರು.
ಕ್ರಿ. ಶ 1776ರಲ್ಲಿ, ಎರಡನೇ ಕಾಂಟಿನೆಂಟಲ್ ಕಾಂಗ್ರೆಸ್ ಸ್ವಾತಂತ್ರ್ಯದ ಘೋಷಣೆಗೆ ಸಹಿ ಹಾಕಿ, ನಂತರ ಅಮೆರಿಕ ಸಂವಿಧಾನ ರಚಿಸಿ, ಸಹಿ ಹಾಕಿದ ಫಿಲಿಡೆಲ್ಫಿಯಾದ ಸ್ವಾತಂತ್ರ್ಯ ಸಭಾಂಗಣಕ್ಕೆ ನ್ಯಾ. ರಮಣ ಭೇಟಿ ನೀಡಿ ಮಾತನಾಡಿದರು.
"ಈ ಸ್ಮಾರಕ ಮಾನವ ನಾಗರಿಕತೆಯ ನಿರ್ಣಾಯಕ ಕ್ಷಣದ ಪ್ರತೀಕವಾಗಿದೆ. ಈ ಪವಿತ್ರ ಸ್ಥಳದಿಂದ ರೂಪಿತವಾದ ಮೌಲ್ಯಗಳಿಂದ ಎಲ್ಲಾ ಪ್ರಜಾಪ್ರಭುತ್ವಗಳು ಸ್ಫೂರ್ತಿ ಪಡೆದಿವೆ. ಇದು ಉಲ್ಲಂಘಿಸಲಾಗದ ಹೊಣೆಯನ್ನು ಜೊತೆಗೆ ಮಾನವ ಘನತೆ ಹಾಗೂ ಅಸ್ತಿತ್ವದ ನಿರ್ಣಾಯಕ ಭರವಸೆಗಳನ್ನು ಪ್ರತಿನಿಧಿಸುತ್ತದೆ. ಪ್ರಪಂಚದಾದ್ಯಂತ ಇಂದಿಗೂ ಮಾರ್ದನಿಸುತ್ತಲೇ ಇರುವ ಅಮೆರಿಕ ಸ್ಥಾಪಕ ಪಿತಾಮಹರನ್ನು ಪ್ರೇರೇಪಿಸಿದ ಶೌರ್ಯ, ಚೈತನ್ಯ ಮತ್ತು ಆದರ್ಶಗಳಿಂದ, ಈ ಐತಿಹಾಸಿಕ ಸಭಾಂಗಣದಲ್ಲಿ ನಿಂತವರಾರೂ ತಪ್ಪಿಸಿಕೊಳ್ಳಲಾಗದು. ಜಗತ್ತಿನ ಪ್ರಜೆಗಳಾದ ನಾವೆಲ್ಲರೂ ನಮ್ಮ ಪೂರ್ವಜರು ಹೋರಾಡಿದ ವಿಮೋಚನೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಮತ್ತು ಮುಂದುವರೆಸಲು ದಣಿವರಿಯದೆ ಕೆಲಸ ಮಾಡುವುದು ಅವಶ್ಯಕ. ಅದು ಅವರ ತ್ಯಾಗಕ್ಕೆ ಸರಿಸಾಟಿಯಾದ ಏಕೈಕ ಗೌರವ” ಎಂದು ಸಿಜೆಐ ತಿಳಿಸಿದರು.
ಕಳೆದ ವಾರ ಇಂಡೋ-ಜರ್ಮನ್ ಚೇಂಬರ್ ಆಫ್ ಕಾಮರ್ಸ್ ಜರ್ಮನಿಯ ಡಾರ್ಟ್ಮಂಡ್‌ನಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಭೆ ಉದ್ಘಾಟಿಸಿ ʼಜಾಗತಿಕರಣಗೊಂಡ ವಿಶ್ವದಲ್ಲಿ ಮಧ್ಯಸ್ಥಿಕೆ- ಭಾರತೀಯ ಅನುಭವʼ ಎಂಬ ವಿಷಯದ ಕುರಿತು ಅವರು ಮಾತನಾಡಿದ್ದರು.