ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಪಡೆದಿದ್ದಾರೆ ಎಂದು ಪ್ರತಿಪಾದಿಸಿದ್ದ ಮನವಿಯ ಕುರಿತಾಗಿ ಗೃಹ ಸಚಿವಾಲಯದಿಂದ ವಿವರಗಳನ್ನು ಪಡೆಯುವಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸೂರ್ಯ ಭಾನ್ ಪಾಂಡೆ ಅವರಿಗೆ ಈ ಸಂಬಂಧ ಗೃಹ ಸಚಿವಾಲಯದಿಂದ ವಿವರಗಳನ್ನು ಪಡೆಯುವಂತೆ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ಪೀಠ ತಿಳಿಸಿತು.
ರಾಹುಲ್ ಅವರ ಪೌರತ್ವದ ಬಗ್ಗೆ ಸಿಬಿಐ ತನಿಖೆ ಕೋರಿ ಎಸ್ ವಿಘ್ನೇಶ್ ಶಿಶಿರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಕೇಂದ್ರಕ್ಕೆ ಸಲ್ಲಿಸಿರುವ ಮನವಿಯ ಸಂಬಂಧ ನಿರ್ಧಾರ ಕೈಗೊಳ್ಳುವಂತೆ ಕೋರಿ ಶಿಶಿರ್ ಹೈಕೋರ್ಟ್ ಮೊರೆ ಹೋಗಿದ್ದರು.
ಶಿಶಿರ್ ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವಂತೆ ಇಂದಿನ ವಿಚಾರಣೆ ವೇಳೆ ಕೋರಿದರು. ಆದರೆ ಈ ವೇಳೆ ನ್ಯಾಯಾಲಯವು ಕೇಂದ್ರ ಸರ್ಕಾರ ಮನವಿಯನ್ನು ಸ್ವೀಕರಿಸಿದೆಯೇ, ಸ್ವೀಕರಿಸಿದ್ದರೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತಾಗಿ ಮಾತ್ರವೇ ಇಂದು ತನ್ನ ಗಮನವಿರುವುದಾಗಿ ತಿಳಿಸಿತು.
ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿರುವುದಾಗಿ ತಿಳಿಸಿದ ಶಿಶಿರ್ ತಮಗೆ ಸಿಕ್ಕ ಗೌಪ್ಯ ಮಾಹಿತಿ ಪ್ರಕಾರ ರಾಹುಲ್ ಬ್ರಿಟಿಷ್ ಪೌರತ್ವ ಪಡೆದಿದ್ದಾರೆ ಎಂದರು.
ನ್ಯಾಯಾಲಯ ಸೆಪ್ಟೆಂಬರ್ 30 ರಂದು ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ. ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬಾಕಿ ಇದೆ.