ಪೊಲೀಸರಿಂದ ಹಿರಿಯ ವಕೀಲರಿಗೆ ಥಳಿತ: ಗೌರವ ಸೂಚಕವಾಗಿ ₹1 ಪರಿಹಾರ ನೀಡಿದ ಅಲಾಹಾಬಾದ್ ಹೈಕೋರ್ಟ್
ಇಪ್ಪತ್ತು ವರ್ಷಗಳ ಹಿಂದೆ ಅಂದರೆ 2004ರಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರಿಗೆ ಪೊಲೀಸರು ಥಳಿಸಿದ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಹಿರಿಯ ನ್ಯಾಯವಾದಿ ಡಾ. ಅಶೋಕ್ ನಿಗಮ್ ಅವರಿಗೆ ಗೌರವ ಸೂಚಕವಾಗಿ ₹1 ಪರಿಹಾರ ನೀಡುವಂತೆ ಅಲಾಹಾಬಾದ್ ಹೈಕೋರ್ಟ್ ಈಚೆಗೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತು [ಡಾ. ಅಶೋಕ್ ನಿಗಮ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಥಳಿತಕ್ಕೊಳಗಾಗಿದ್ದ ವಕೀಲರಿಗೆ ಪರಿಹಾರ ನೀಡಬೇಕು ಹಾಗೂ ಪೊಲಿಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು 2007ರಲ್ಲಿ ಮನವಿ ಸಲ್ಲಿಸಿದ್ದರು.
ಪ್ರಕರಣ ಸಾಕಷ್ಟು ಹಳೆಯದಾಗಿದೆ ಎಂದ ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಎಷ್ಟು ಪರಿಹಾರ ನಿರೀಕ್ಷಿಸುವಿರಿ ಎಂದು ಡಾ. ನಿಗಮ್ ಅವರನ್ನು ಪ್ರಶ್ನಿಸಿತ್ತು.
ಇದು ವಕೀಲರ ಘನತೆಗೆ ಸಂಬಂಧಿಸಿದ ಹೋರಾಟವಾದ್ದರಿಂದ ನ್ಯಾಯಾಲಯ ನಿಗದಿಪಡಿಸುವ ಯಾವುದೇ ಪರಿಹಾರ ಸ್ವೀಕರಿಸುವುದಾಗಿ ಅವರು ಈ ಹಿಂದೆ ತಿಳಿಸಿದ್ದರು. ಅದರಂತೆ ನ್ಯಾಯಾಲಯ “ಹಿರಿತನದ ಸ್ಥಾನಮಾನ ಮತ್ತು ಗೌರವ ಪರಿಗಣಿಸಿ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲರಾದ ಡಾ ನಿಗಮ್ ಅವರಿಗೆ ಪರಿಹಾರವಾಗಿ ಅರ್ಜಿದಾರರು 1 ರೂಪಾಯಿ ಪಾವತಿಸಲು ಆದೇಶಿಸುತ್ತಿದ್ದೇವೆ” ಎಂದಿತು.
ಡಾ ನಿಗಮ್ ಅವರು ಹಿರಿಯರ ಸಮಿತಿಯ ಅಧ್ಯಕ್ಷರಾಗಿದ್ದು ಲಖನೌ ಪೀಠದಲ್ಲಿ ಪ್ರಮುಖ ವಕೀಲರಾಗಿದ್ದಾರೆ.
ಪೊಲೀಸರ ಕ್ರಮದ ಬಗ್ಗೆ ತನಿಖೆ ನಡೆಸಲು ಈ ಹಿಂದೆ ನೇಮಿಸಲಾದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗವು, ಸಮಯ ಸಂದಂತೆ ವಾತಾವರಣ ತಿಳಿಯಾಗಿದೆ ಎಂದು ಹೇಳಿ ಪ್ರಕರಣವನ್ನು ಮುಚ್ಚಲು ಶಿಫಾರಸು ಮಾಡಿತ್ತು. ಆದರೆ ಪೊಲೀಸರು ನಿರ್ದಯವಾಗಿ ವಕೀಲರನ್ನು ಥಳಿಸಿದ ಆರೋಪ ಒಳಗೊಂಡಿರುವ ಪ್ರಕರಣವನ್ನು ಮುಕ್ತಾಯಗೊಳಿಸಲಾಗದು ಎಂದು 2020 ರಲ್ಲಿ ನ್ಯಾಯಾಲಯ ಹೇಳಿತ್ತು. ಆದರೆ ಡಾ. ನಿಗಮ್ ಅವರ ಸಮ್ಮತಿಯೊಂದಿಗೆ ಪ್ರಕರಣಕ್ಕೆ ಅಂತ್ಯ ಹಾಡಲು ಕಳೆದ ತಿಂಗಳು ನ್ಯಾಯಾಲಯ ನಿರ್ಧರಿಸಿತ್ತು.