ನ್ಯಾಯಾಂಗವನ್ನು ಅವಮಾನಿಸುವ ಯತ್ನ: ನ್ಯಾ. ಬಿ ಎಸ್‌ ಚೌಹಾಣ್‌ ಭೇಟಿಗೆ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಪರಿಷತ್‌ ವಿರೋಧ

ಈ ನಡವಳಿಕೆಯು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ವಕೀಲನೂ ಸಿಡಿದು ನಿಲ್ಲಬೇಕು ಎಂದು ಪರಿಷತ್‌ ಆಕ್ರೋಶದಿಂದ ಹೇಳಿದೆ.
Justice BS Chauhan, Allahabad High Court Bar Association
Justice BS Chauhan, Allahabad High Court Bar Association

ಅರವತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಉತ್ತರ ಪ್ರದೇಶದ ರೌಡಿ ಶೀಟರ್ ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಚೌಹಾಣ್‌ ಅವರು ಅಲಾಹಾಬಾದ್‌ ಹೈಕೋರ್ಟ್‌ ಭೇಟಿ ವಿರೋಧಿಸಿ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಪರಿಷತ್ತು ನಿರ್ಣಯವೊಂದನ್ನು ಮಂಡಿಸಿದೆ.

ವಿಕಾಸ್‌ ದುಬೆಯನ್ನು ಎನ್‌ಕೌಂಟರ್‌ ಮೂಲಕ ಕೊಲ್ಲಲಾಗಿರುವುದಕ್ಕೆ ಸಂಬಂಧಿಸಿದಂತೆ ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ನ್ಯಾ. ಚೌಹಾಣ್‌ ನೇತೃತ್ವದ ತನಿಖಾ ಆಯೋಗಕ್ಕೆ ಒಪ್ಪಿಗೆ ನೀಡಿತ್ತು. ಆದರೆ, ಅಲಾಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಕಾರ್ಯವಿಧಾನವನ್ನು ತನಿಖೆಗೆ ಒಳಪಡಿಸಲು ನ್ಯಾ. ಚೌಹಾಣ್‌ ಅವರು ಭೇಟಿ ನೀಡುತ್ತಿರುವ ಕ್ರಮವು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಜನವರಿ 8ರಂದು ಹೊರಡಿಸಲಾದ ನಿರ್ಣಯದಲ್ಲಿ ವಿವರಿಸಲಾಗಿದೆ.

ಹೈಕೋರ್ಟ್‌ ವಕೀಲರ ಪರಿಷತ್‌ ಅಧ್ಯಕ್ಷ ಅಮರೇಂದ್ರನಾಥ್‌ ಸಿಂಗ್‌ ಮತ್ತು ಕಾರ್ಯದರ್ಶಿ ಪಿ ಶಂಕರ್‌ ಮಿಶ್ರಾ ಅವರ ಸಮ್ಮುಖದಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. “ಇದು (ನ್ಯಾ. ಚೌಹಾಣ್‌ ಭೇಟಿ) ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಭಂಗ ತರುವ ಪ್ರಯತ್ನವಾಗಿದೆ. ಅಲ್ಲದೆ, ಇದು ಉತ್ತರ ಪ್ರದೇಶ ನ್ಯಾಯಾಂಗಕ್ಕೆ ಅಪಕೀರ್ತಿ ತರುವ ಯತ್ನವಾಗಿದೆ” ಎಂದು ನಿಲುವಳಿಯಲಿ ಉಲ್ಲೇಖಿಸಲಾಗಿದೆ.

ಅವಶ್ಯಕತೆ ಬಿದ್ದರೆ ಉತ್ತರ ಪ್ರದೇಶದ ಎಲ್ಲಾ ವಕೀಲರು ನ್ಯಾ. ಚೌಹಾಣ್‌ ಅವರ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪರಿಷತ್ತು ಘೋಷಿಸಿದೆ. “ನ್ಯಾ. ಚೌಹಾಣ್ ಅವರ ಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ತನಿಖಾ ಆಯೋಗದ ಭೇಟಿಯನ್ನು ನಾವು ವಿರೋಧಿಸುತ್ತೇವೆ. ಅವಶ್ಯಕತೆ ಬಿದ್ದರೆ ಈ ಕಾನೂನುಬಾಹಿರ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸಲು ಉತ್ತರ ಪ್ರದೇಶದಾದ್ಯಂತ ವಕೀಲರಿಗೆ ಕರೆ ನೀಡಲಾಗುವುದು,” ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗದ ವಿರುದ್ಧ ತನಿಖೆ ನಡೆಸಲು ಯಾವುದೇ ಸಮಿತಿಗೆ ಸಂವಿಧಾನದ ಯಾವುದೇ ನಿಬಂಧನೆಯಲ್ಲಿ ಅವಕಾಶ ಕಲ್ಪಿಸಲಾಗಿಲ್ಲ ಎಂದು ನಿಲುವಳಿಯಲ್ಲಿ ವಿವರಿಸಲಾಗಿದೆ. “ನ್ಯಾ. ಚೌಹಾಣ್‌ ಅವರಿಗೂ ಈ ರೀತಿಯ ತನಿಖೆಯು ಕಾನೂನುಬಾಹಿರ/ಅಸಾಂವಿಧಾನಿಕ ಎಂಬುದು ತಿಳಿದಿದೆ. ಇದು ಉತ್ತರ ಪ್ರದೇಶದ ನ್ಯಾಯಾಂಗಕ್ಕೆ ಅಪಕೀರ್ತಿ ತರುವ ಯತ್ನ,” ಎಂದು ಪರಿಷತ್‌ ಖಂಡಿಸಿದೆ.

ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನವಾಗಿದ್ದು, ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ವಕೀಲನೂ ಸಿಡಿದು ನಿಲ್ಲಬೇಕಿದೆ ಎಂದು ಪರಿಷತ್‌ ಹೇಳಿದೆ. “ಇಂಥ ಕೆಟ್ಟ ಸಂದರ್ಭದಲ್ಲಿ ಈ ಭೇಟಿಯ ವಿರುದ್ಧ ವಕೀಲರ ಸಮುದಾಯದ ಪ್ರತಿಯೊಬ್ಬರೂ ಎದ್ದು ನಿಲ್ಲಬೇಕಿದೆ. ನ್ಯಾ. ಚೌಹಾಣ್‌ ಅವರ ಭೇಟಿಯನ್ನು ವಕೀಲರ ಪರಿಷತ್ತಿನ ಸದಸ್ಯರು ತೀವ್ರವಾಗಿ ಖಂಡಿಸುತ್ತಾರೆ” ಎಂದು ಹೇಳಲಾಗಿದೆ.

Also Read
931 ಕ್ರಿಮಿನಲ್ ಜಾಮೀನು ಅರ್ಜಿಗಳು, ಶಿಕ್ಷೆ ಅಮಾನತು ಕೋರಿದ 141 ಪ್ರಕರಣಗಳು ಬಾಕಿ ಇವೆ: ಆರ್‌ಟಿಐಗೆ ʼಸುಪ್ರೀಂʼ ಉತ್ತರ

ಕಳೆದ ಆಗಸ್ಟ್‌ನಲ್ಲಿ ನ್ಯಾ. ಚೌಹಾಣ್‌ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ನ್ಯಾ. ಚೌಹಾಣ್‌ ಅವರ ಕುಟುಂಬ ಸದಸ್ಯರ ರಾಜಕೀಯ ಸಂಬಂಧಗಳನ್ನು ಉಲ್ಲೇಖಿಸಿ ಪಕ್ಷಪಾತದ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದರು. ಮನವಿಯಲ್ಲಿ ಸತ್ವವಿಲ್ಲ ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠವು ಅರ್ಜಿ ವಜಾಗೊಳಿಸಿತ್ತು.

ಹಿನ್ನೆಲೆ: ನ್ಯಾ. ಚೌಹಾಣ್‌ ಅವರ ನಡೆಯು ಯಾವಾಗಲೂ ವಕೀಲರ ವಿರೋಧಿಯಾಗಿದೆ. ಈಗ ಅದು ನ್ಯಾಯಾಂಗದ ವಿರೋಧಿಯಾಗಿ ಬದಲಾಗಿದೆ ಎಂದು ವಕೀಲರ ಪರಿಷತ್ತು ಆರೋಪಿಸಿದ್ದು, ನ್ಯಾ. ಚೌಹಾಣ್‌ ಅವರು ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗ ನಡೆದ ವಕೀಲ ಶ್ರೀಕಾಂತ್‌ ಆವಸ್ಥಿ ಪ್ರಕರಣವನ್ನು ಉಲ್ಲೇಖಿಸಲಾಗಿದೆ.

ವಕೀಲ ಶ್ರೀಕಾಂತ್ ಆವಸ್ಥಿಯವರ ಮೇಲೆ ನ್ಯಾ. ಚೌಹಾಣ್‌ ಅವರು ನ್ಯಾಯಾಂಗ ನಿಂದನೆ ಪ್ರಕರಣದ ಆರೋಪವನ್ನು ಈ ಹಿಂದೆ ಹೊರಿಸಿದ್ದರು. ಆ ಪ್ರಕರಣದಲ್ಲಿ ಆವಸ್ಥಿಯವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆ ವೇಳೆ ಪೊಲೀಸರು ಆವಸ್ಥಿ ಅವರ ಮೇಲೆ ಹಲ್ಲೆ ನಡೆಸಲು, ಹಿಂಸಾಚಾರ ಎಸಗಲು ನ್ಯಾ.ಚೌಹಾಣ್ ಅವರು ಕುಮ್ಮಕ್ಕು ನೀಡಿದ್ದರು ಎನ್ನುವ ಆರೋಪವಿತ್ತು. ಆವಸ್ಥಿಯವರು ಜೈಲಿನಲ್ಲಿದ್ದಾಗ ಗಂಭೀರವಾಗಿ ಹಲ್ಲೆಗೊಳಗಾಗಿ, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಮೃತರಾಗಿದ್ದರು. ಈ ಸಂಬಂಧ ನಡೆದಿದ್ದ ತನಿಖೆಯು ಪ್ರಕರಣದಲ್ಲಿ ನ್ಯಾ. ಚೌಹಾಣ್‌ ಅವರ ಪಾತ್ರವಿಲ್ಲ ಎನ್ನುವುದಾಗಿ ವರದಿ ನೀಡಿತ್ತು. ಆದರೆ, ತನಿಖಾ ವರದಿಯ ಕುರಿತಾಗಿ ವಕೀಲರ ಒಕ್ಕೂಟಗಳಿಗೆ ಸಹಮತವಿರಲಿಲ್ಲ.

Related Stories

No stories found.
Kannada Bar & Bench
kannada.barandbench.com