ನ್ಯಾ. ಯಶವಂತ್‌ ವರ್ಮಾ ವರ್ಗಾವಣೆ ವಿರುದ್ಧ ಧರಣಿ ಸ್ಥಗಿತಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ

ನ್ಯಾ. ವರ್ಮಾ ವಿರುದ್ಧ ಸುಪ್ರೀಂ ಕೋರ್ಟ್‌ ನೇಮಿಸಿರುವ ತ್ರಿಸದಸ್ಯ ಸಮಿತಿ ವರದಿ ನೀಡುವವರೆಗೆ ಧರಣಿ ನಿಲ್ಲಿಸಲು ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ ನಿರ್ಧರಿಸಿದೆ.
ನ್ಯಾ. ಯಶವಂತ್‌ ವರ್ಮಾ ವರ್ಗಾವಣೆ ವಿರುದ್ಧ ಧರಣಿ ಸ್ಥಗಿತಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ
Published on

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ (ಎಚ್‌ಸಿಬಿಎ) ನಡೆಸುತ್ತಿದ್ದ ಧರಣಿಯನ್ನು ಸುಪ್ರೀಂ ಕೋರ್ಟ್‌ ನೇಮಿಸಿರುವ ತ್ರಿಸದಸ್ಯ ಸಮಿತಿಯು ವರದಿ ನೀಡುವವರೆಗೆ ಮಾರ್ಚ್‌ 29ರಂದು ಸ್ಥಗಿತಗೊಳಿಸಿದೆ.

ನ್ಯಾ. ವರ್ಮಾ ಅವರ ನಿವಾಸದಲ್ಲಿ ಬೆಂಕಿಯಲ್ಲಿ ಸುಟ್ಟು ಹೋದ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನ್ಯಾಯಮೂರ್ತಿಗಳ ಸಮಿತಿಯು ವರ್ಮಾ ಅವರ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸುವವರೆಗೆ ಪ್ರತಿಭಟನೆ ಸ್ಥಗಿತಗೊಳಿಸುವುದಾಗಿ ಠರಾವು ಪಾಸು ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಮಾರ್ಚ್‌ 29ರಂದು ನಡೆದ ಎಚ್‌ಸಿಬಿಎ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಹೀಗಿವೆ:

  • ಪ್ರಕರಣದ ಸಂಬಂಧ ಮೂವರು ನ್ಯಾಯಮೂರ್ತಿಗಳು ತನಿಖೆ ನಡೆಸುತ್ತಿದ್ದು, ಅವರು ನೀಡುವ ವರದಿ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು. ಹೀಗಾಗಿ, ಏಪ್ರಿಲ್‌ 1ರಿಂದ ನ್ಯಾಯಾಂಗ ಕೆಲಸಗಳು ಪುನಾರಂಭಗೊಳ್ಳಲಿವೆ.

  • ದಾವೆದಾರರು ಮತ್ತು ವಕೀಲರಿಗೆ ಫೋಟೊ ಗುರುತಿನ ಕೇಂದ್ರ ಆರಂಭಿಸುವ ಮೂಲಕ ಸರಳವಾಗಿ ನ್ಯಾಯಾಂಗ ಪ್ರಕ್ರಿಯೆ ನಡೆಸಲು ಪ್ರಸ್ತಾವ ಅನುಮೋದಿಸಲಾಗಿದೆ.

  • ದೇಶದ ಎಲ್ಲಾ ವಕೀಲರ ಸಂಘಗಳ ಬೆಂಬಲ ಪಡೆಯುವ ಮೂಲಕ ಧರಣಿಯನ್ನು ಮತ್ತಷ್ಟು ಸದೃಢಗೊಳಿಸಲು ಏಪ್ರಿಲ್‌ 26-27ರಂದು ಪ್ರಯಾಗ್‌ರಾಜ್‌ನಲ್ಲಿನ ಹೈಕೋರ್ಟ್‌ ವಕೀಲರ ಸಂಘದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗೋಷ್ಠಿ ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.

Kannada Bar & Bench
kannada.barandbench.com