ಮೊಹಮ್ಮದ್ ಜುಬೈರ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಅಲಾಹಾಬಾದ್ ಹೈಕೋರ್ಟ್ ಪೀಠ

ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬೆಂಬಲಿಗರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಿಂದ ರಕ್ಷಣೆ ಕೋರಿ ಜುಬೈರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Mohammed Zubair, Yati Narsinghanand and Allahabad High Court
Mohammed Zubair, Yati Narsinghanand and Allahabad High Court
Published on

ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬೆಂಬಲಿಗರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸದಂತೆ ಕೋರಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮತ್ತು ಪತ್ರಕರ್ತ ಮೊಹಮ್ಮದ್ ಜುಬೈರ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಅಲಾಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರು ಹಿಂದೆ ಸರಿದಿದ್ದಾರೆ.

ಪ್ರಕರಣವನ್ನು ಮತ್ತೊಂದು ಪೀಠದೆದುರು ಪ್ರಸ್ತಾಪಿಸುವಂತೆ ಪೀಠ ಸೂಚಿಸಿದೆ.

Also Read
ಪತ್ರಕರ್ತ ಜುಬೈರ್‌ ವಿರುದ್ಧ 'ದುಷ್ಟ ಕ್ರಮಗಳ ಸರಣಿ': ಆತುರದ ಹೆಜ್ಜೆ ಇರಿಸದಂತೆ ಯುಪಿ ಪೊಲೀಸರಿಗೆ ಸುಪ್ರೀಂ ತಾಕೀತು

ಜುಬೈರ್‌ ಅವರ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಬಿಎನ್‌ಎಸ್‌ ಸೆಕ್ಷನ್‌ 152ರ ಅಡಿ ದೇಶದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ಕಳೆದ ವಿಚಾರಣೆ ವೇಳೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದರು.

ನರಸಿಂಹಾನಂದ ಅವರು ಸೆಪ್ಟೆಂಬರ್ 29 ರಂದು ಸಾರ್ವಜನಿಕ ಭಾಷಣವೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಭಾಷಣವನ್ನುಅವಹೇಳನಕರ ಮತ್ತು ದ್ವೇಷಪೂರಿತ ಎಂದು ಜುಬೈರ್‌ ಎಕ್ಸ್‌ ಖಾತೆಯಲ್ಲಿ ಆಕ್ಷೇಪಿಸಿದ್ದ ಪರಿಣಾಮ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನರಸಿಂಹಾನಂದ್ ವಿರುದ್ಧ ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡಿದ ಮತ್ತು ಧಾರ್ಮಿಕ ಭಾವನೆಗೆ ಘಾಸಿ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಪೊಲೀಸರು ನರಸಿಂಹಾನಂದರನ್ನು ಬಂಧಿಸದಿದ್ದರೂ ಅವರನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಅವರ ಅನುಯಾಯಿಗಳು ತಿಳಿಸಿದ್ದರು. ನಂತರ ದಾಸ್ನಾದೇವಿ ದೇವಸ್ಥಾನದಲ್ಲಿ ಪ್ರತಿಭಟನೆ ನಡೆದಿತ್ತು.

Also Read
ಗಾಜಿಯಾಬಾದ್‌ ದಾಳಿ ವಿಡಿಯೊ: ʼಆಲ್ಟ್‌ನ್ಯೂಸ್‌ʼ ಜುಬೈರ್‌ ಕೋರಿದ ಟ್ರಾನ್ಸಿಟ್‌ ಜಾಮೀನು ಸಂಬಂಧ ಹೈಕೋರ್ಟ್‌ ನೋಟಿಸ್‌

ದಾಸ್ನಾ ದೇವಿ ಮಂಡಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಜುಬೈರ್, ಅರ್ಷದ್ ಮದನಿ ಮತ್ತು ಅಸಾದುದ್ದೀನ್ ಓವೈಸಿ ಅವರನ್ನು ದೂಷಿಸಿ ಯತಿ ನರಸಿಂಹಾನಂದ್ ಅವರ ಆಪ್ತ ಸಹಾಯಕ ಡಾ. ಉದಿತಾ ತ್ಯಾಗಿ ಅವರು ನಂತರ ದೂರು ದಾಖಲಿಸಿದ್ದರು.

ಜುಬೈರ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 (ಧರ್ಮಾಧಾರಿತ ದ್ವೇಷಕ್ಕೆ ಕುಮ್ಮಕ್ಕು), 228 (ಸುಳ್ಳು ಪುರಾವೆ ಸೃಷ್ಟಿ) , 299 (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವುದು) , 356(3) (ಮಾನಹಾನಿ) , ಮತ್ತು 351(2) (ಕ್ರಿಮಿನಲ್‌ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.

Kannada Bar & Bench
kannada.barandbench.com