ನನ್ನ ಪಾಲಿಗೆ ಡಾ.ಅಂಬೇಡ್ಕರ್‌ ಅವರು ಬಡವರ ದೇವರು: ಅಲಾಹಾಬಾದ್‌ ಹೈಕೋರ್ಟ್‌ ಸಿಜೆ ಗೋವಿಂದ್ ಮಾಥೂರ್‌ ವಿದಾಯ ಭಾಷಣ

ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ತಮ್ಮ ವೃತ್ತಿ ಜೀವನದ ಅಂತಿಮ ದಿನಗಳನ್ನು ನ್ಯಾಯಾಲಯದಲ್ಲಿ ಕಳೆಯಲು ಆಗದೆ ಇರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್ ಅವರು ಬೇಸರ ವ್ಯಕ್ತಪಡಿಸಿದರು.
Chief Justice Govind Mathur
Chief Justice Govind Mathur

‘ಅಂಬೇಡ್ಕರ್‌ ಅವರ ಹೆಸರನ್ನು ಮೊದಲ ಬಾರಿಗೆ ನಾನು 1970ರಲ್ಲಿ ಕೇಳಿದೆ. ಅದೊಂದು ದಿನ ಅವರ ಚಿತ್ರವನ್ನು ನಾನು ಕಂಡೆ, ಅವರನ್ನು ನನಗೆ ‘ಬಡವರ ದೇವರು’ ಎಂದು ಪರಿಚಯಿಸಲಾಯಿತು. ಅಂದಿನಿಂದಲೂ ಸಹ ಅವರು ನನ್ನ ಪಾಲಿಗೆ ಬಡವರ ದೇವರೇ ಆಗಿದ್ದಾರೆ. ಸಂವಿಧಾನದಲ್ಲಿ ಪ್ರತಿಫಲಿತವಾಗಿರುವ ಅವರ ಆದರ್ಶಗಳನ್ನು ನಾನು ಸದಾ ಸ್ಮರಿಸುತ್ತೇನೆ,’ ಹೀಗೆ ಭಾವುಕವಾಗಿ ನುಡಿದವರು ಅಲಾಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌.

ಏಪ್ರಿಲ್‌‌ 14ರಂದು ಮಾಥೂರ್‌ ಅವರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ವಿದಾಯ ಸಮಾರಂಭವನ್ನು ಆಯೋಜಿಸಲಾಗಿತ್ತು. ಮಾಥೂರ್‌ ಅವರಿಗೆ ಕೋವಿಡ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ವರ್ಚುವಲ್‌ ಸಮಾರಂಭದ ಮೂಲಕ ವಿದಾಯ ಕೋರಲಾಯಿತು.

ತಮ್ಮ ವಿದಾಯ ಭಾಷಣದಲ್ಲಿ ಡಾ. ಅಂಬೇಡ್ಕರ್ ಅವರನ್ನು ಮನಸಾರೆ ನೆನೆದ ಮಾಥೂರ್ ಅವರು, “ಭಾರತ ರತ್ನ ಡಾ. ಬಿ ಆರ್‌ ಅಂಬೇಡ್ಕರ್ ಅವರ ಹುಟ್ಟಿದ ದಿನದಂದೇ ನನ್ನ ಜನನವೂ ಆಗಿರುವುದು ಆಕಸ್ಮಿಕವಾಗಿದೆ” ಎಂದರು.

ಭಾವುಕ ಸಂದೇಶದ ಮೂಲಕ ಭಾಷಣ ಆರಂಭಿಸಿದ ಮಾಥೂರ್‌ ಅವರು, “ಇದು ವಿದಾಯವನ್ನು ಹೇಳುವ ಸಮಯ. ಅದರೆ ಈ ವಿದಾಯ ಉತ್ತರ ಪ್ರದೇಶಕ್ಕಾಗಲಿ, ಲಖನೌಗಾಲಿ ಅಥವಾ ಅಲಾಹಾಬಾದ್‌ಗಾಗಲಿ ಅಲ್ಲ. ಬದಲಿಗೆ, ಇದು ಸಾಂವಿಧಾನಿಕ ನ್ಯಾಯನಿರ್ಣಯದ ಅಧಿಕಾರಕ್ಕೆ ವಿದಾಯವನ್ನು ಹೇಳುವ ಸಮಯವಾಗಿದೆ. ಭವಿಷ್ಯದ ದಿನಗಳಲ್ಲಿ ನಾನು ಜಗತ್ತಿನಲ್ಲಿ ಯಾವುದೇ ಅಧಿಕಾರವನ್ನು ಹೊಂದಬಹುದು, ಅದರೆ ಭಾರತದ ಸಂವಿಧಾನದ ಅಡಿ ಪವಿತ್ರವಾದ ಈ ನ್ಯಾಯನಿರ್ಣಯ ಮಾಡುವ ಅಧಿಕಾರವನ್ನು ಹೊಂದಲು ಸಾಧ್ಯವಿಲ್ಲ,” ಎಂದರು.

“ಕೋವಿಡ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ನನ್ನ ಪಾಲಿಗೆ ಅಮೂಲ್ಯವಾದ ಅಂತಿಮ ಕೆಲಸದ ದಿನಗಳನ್ನು ಕಳೆದುಕೊಂಡಿದ್ದೇನೆ. ನನ್ನ ನಿವಾಸದಿಂದ ನಾನು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ವೃತ್ತಿಯ ಕೊನೆಯ ದಿನದಂದು ನ್ಯಾಯಾಲಯದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ನಾನು ಪಡೆಯದಾಗಿದ್ದೇನೆ. ಇದಕ್ಕಿಂತ ನತದೃಷ್ಟತೆ ಬೇರೇನು ಇರಲು ಸಾಧ್ಯ?” ಎಂದು ವಿಷಣ್ಣರಾದರು.

ಪ್ರಯಾಗ್‌ರಾಜ್‌ನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನೀಡಿದ್ದ ವಚನವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈಡೇರಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಮಾಥೂರ್‌ ಅರ್ಪಿಸಿದರು.

ಕೊಟ್ಟ ಮಾತುಗಳನ್ನು ತಪ್ಪದೆ ಪಾಲಿಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ನಾನು ವೈಯಕ್ತಿಕವಾಗಿ ಆಭಾರಿಯಾಗಿದ್ದೇನೆ. ಈ ನಗರಕ್ಕೆ (ಪ್ರಯಾಗ್‌ರಾಜ್) ಉತ್ತರ ಪ್ರದೇಶ ಸರ್ಕಾರದ ದೊಡ್ಡ ಕೊಡುಗೆ ಎಂದರೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದಾಗಿದೆ.

- ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌

ತಮ್ಮ ವಿದಾಯ ಭಾಷಣದಲ್ಲಿ ಮಾಥೂರ್‌ ಅವರು, ನ್ಯಾಯಮೂರ್ತಿ ಫೈಸಲ್‌ ಅರಬ್‌ ಅವರ “ಸಮಾಜದಿಂದ ನ್ಯಾಯವನ್ನು ಹಿಂಪಡೆದರೆ ಆಗ ಸಮಾಜದಿಂದ ನೀವು ನಾಗರಿಕ ವರ್ತನೆಯನ್ನು ಹಿಂಪಡೆಯುತ್ತೀರಿ,” ಎನ್ನುವ ಮಾತುಗಳನ್ನು ಉದಾಹರಿಸಿದರು. ಆ ಮೂಲಕ ನ್ಯಾಯದಾನ ವ್ಯವಸ್ಥೆ ಸಮಾಜವನ್ನು ನಾಗರಿಕವಾಗಿರುಸುತ್ತದೆ ಎಂದು ವಿವರಿಸಿದರು.

ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಬೃಹತ್ ಬಾಕಿ ಉಳಿಕೆ ಪ್ರಕರಣಗಳ ಸಂಖ್ಯೆ‌ ಇರುವ ಬಗ್ಗೆ ಪ್ರಸ್ತಾಪಿಸಿದ ಅವರು, “ಮುಖ್ಯ ನ್ಯಾಯಮೂರ್ತಿಯಾಗಿ ಹೇಳುವುದಾದರೆ ಬೇರಾವುದೇ ನ್ಯಾಯಾಲಯಕ್ಕಿಂತ ಇಲ್ಲಿ ಹೆಚ್ಚಿನ ಪ್ರಕರಣಗಳು ವಿಲೇವಾರಿಯಾಗುತ್ತವೆ. ಬಾಕಿ ಉಳಿಕೆ ಪ್ರಕರಣಗಳನ್ನು ಹೊಸದಾಗಿ ಬರುವ ಪ್ರಕರಣಗಳ ಸಂಖ್ಯೆಯೊಂದಿಗೆ ತುಲನೆ ಮಾಡಿ ನೋಡಬೇಕಾಗುತ್ತದೆ. ಇಲ್ಲಿ ನಡೆದಿರುವ ಬೃಹತ್‌ ಪ್ರಮಾಣದ, ವೈವಿಧ್ಯಮಯ ಕೆಲಸಗಳನ್ನು ಪರಿಗಣಿಸಬೇಕಾಗುತ್ತದೆ,” ಎಂದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಸಹಕಾರ ನೀಡಿದ ವಕೀಲ ಸಮುದಾಯ ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸಿದರು.ಎಳೆವೆಯಲ್ಲೇ ಪೋಷಕರನ್ನು ಕಳೆದುಕೊಂಡ ತಮಗೆ ಕುಟುಂಬದ ಹಿರಿಯರು ನೀಡಿದ ಬೆಂಬಲವನ್ನು ನೆನೆದು ಧನ್ಯವಾದಗಳನ್ನು ಅರ್ಪಿಸಿದರು. ಹೈಕೋರ್ಟ್‌ನ ತಮ್ಮ ಸಿಬ್ಬಂದಿಯನ್ನು ವಿಶೇಷವಾಗಿ ನೆನೆದು ಧನ್ಯವಾದ ಹೇಳಿದರು.

“ನಾನು ಸೋತಿದ್ದೇನೆಯೋ, ಗೆದ್ದಿದ್ದೇನೆಯೋ ಇದನ್ನು ನಿರ್ಣಯಿಸುವುದನ್ನು ನಿಮಗೆ ಬಿಡುತ್ತೇನೆ… ನಿಮ್ಮ ತೀರ್ಮಾನಗಳಿಗೆ ನಾನು ಗೌರವದಿಂದ ತಲೆಬಾಗುತ್ತೇನೆ. ಎಲ್ಲರಿಗೂ ಧನ್ಯವಾದಗಳು,” ಎಂದು ಮಾತು ಮುಗಿಸಿದರು.

Related Stories

No stories found.
Kannada Bar & Bench
kannada.barandbench.com