ಹಿಂದೂಗಳ ಪ್ರಾರ್ಥನೆಗೆ ಅನುಮತಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಅಲಾಹಾಬಾದ್‌ ಹೈಕೋರ್ಟ್‌ ನಕಾರ

ಜ್ಞಾನವಾಪಿ ಮಸೀದಿಯ ಆಸ್ತಿಯ ಕುರಿತಾದ ಧಾರ್ಮಿಕ ಸ್ವರೂಪದ ಬಗ್ಗೆ ನಡೆಯುತ್ತಿರುವ ವಿವಾದದ ಮಧ್ಯೆ, ಜನವರಿ 31ರಂದು ಜಿಲ್ಲಾ ನ್ಯಾಯಾಲಯವು ಮಸೀದಿಯ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂ ಪಕ್ಷಗಳಿಗೆ ಅನುಮತಿಸಿತು.
Gyanvapi Mosque
Gyanvapi Mosque

ವಾರಣಾಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷಕಾರರಿಗೆ ಪ್ರಾರ್ಥನೆ ಮತ್ತು ಪೂಜೆ ನಡೆಸಲು ಜನವರಿ 31ರ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಜನವರಿ 31ರ ಆದೇಶವನ್ನು ಜಾರಿಗೊಳಿಸಿದ ಪರಿಣಾಮವಾಗಿ ಜನವರಿ 17ರ ಆದೇಶಕ್ಕೆ ಸವಾಲನ್ನು ಸೇರಿಸಲು ಮುಸ್ಲಿಂ ಪಕ್ಷಕಾರರಿಗೆ (ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ) ತನ್ನ ಮನವಿಗಳನ್ನು ತಿದ್ದುಪಡಿ ಮಾಡಲು ಹೈಕೋರ್ಟ್ ಇಂದು ಫೆಬ್ರವರಿ 6ರವರೆಗೆ ಕಾಲಾವಕಾಶವನ್ನು ನೀಡಿದೆ. ತಿದ್ದುಪಡಿಯಾದ ಬಳಿಕ ಪ್ರಕರಣದ ವಿಚಾರಣೆಯನ್ನು ನಡೆಸಲಾಗುತ್ತದೆ.

ಅಲ್ಲಿಯವರಿಗೆ ಜ್ಞಾನವಾಪಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ (ಅಡ್ವೊಕೇಟ್‌ ಜನರಲ್)‌ ನ್ಯಾಯಾಲಯ ಆದೇಶಿಸಿದೆ.

ವಾರಾಣಸಿ ನ್ಯಾಯಾಲಯವು ಜನವರಿ 31ರಂದು ಮಾಡಿರುವ ಆದೇಶ ಪ್ರಶ್ನಿಸಿ ಜ್ಞಾನವಾಪಿ ಸಮಿತಿ ಉಸ್ತುವಾರಿ ನಿಭಾಯಿಸುತ್ತಿರುವ ಅಂಜುಮನ್‌ ಇಂತೆಜಾಮಿಯಾ ಮಸ್ಜಿದ್‌ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರೋಹಿತ್‌ ರಂಜನ್‌ ಅಗರ್ವಾಲ್‌ ಅವರ ನೇತೃತ್ವದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.

ಜಿಲ್ಲಾ ದಂಡಾಧಿಕಾರಿಯನ್ನು ಪ್ರಕರಣದಲ್ಲಿ ಸ್ವೀಕರ್ತರನ್ನಾಗಿ (ರಿಸೀವರ್) ನೇಮಿಸಿ ಜನವರಿ 17ರಂದು ಮಾಡಲಾಗಿರುವ ಆದೇಶವನ್ನು ಮುಸ್ಲಿಮ್‌ ಪಕ್ಷಕಾರರು ಪ್ರಶ್ನಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಸೀದಿಯ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾ ದಂಡಾಧಿಕಾರಿಗೆ ಜನವರಿ 31ರಂದು ನ್ಯಾಯಾಲಯ ಆದೇಶಿಸಿತ್ತು.

“ಜಿಲ್ಲಾ ದಂಡಾಧಿಕಾರಿಯನ್ನು ಸ್ವೀಕರ್ತ (ರಿಸೀವರ್‌) ಆಗಿ ನೇಮಕ ಮಾಡಿರುವ ಜನವರಿ 17ರ ಆದೇಶವನ್ನು ನೀವು ಪ್ರಶ್ನಿಸಿಲ್ಲ. ಜನವರಿ 31ರ ಆದೇಶವು ಇದರ ತತ್ಪರಿಣಾಮ ಆದೇಶವಾಗಿದೆ… ಹೀಗಾಗಿ, ನಿಮ್ಮ ಮೇಲ್ಮನವಿಯನ್ನು ತಿದ್ದುಪಡಿ ಮಾಡಬೇಕು” ಎಂದು ಪೀಠವು ಮುಸ್ಲಿಮ್‌ ಪಕ್ಷಕಾರರಿಗೆ ಸೂಚಿಸಿತು.

ಮುಂದುವರಿದು, ಜನವರಿ 31ರ ಆದೇಶ ಮಾಡುವುದಕ್ಕೂ ಮುನ್ನ ವಾರಾಣಸಿ ನ್ಯಾಯಾಲಯವು ಮಸೀದಿ ಸಮಿತಿಯ ವಾದ ಆಲಿಸಿತ್ತೇ ಎಂದು ಪ್ರಶ್ನಿಸಿತು. ಜಿಲ್ಲಾ ದಂಡಾಧಿಕಾರಿಯನ್ನು ರಿಸೀವರ್‌ ಆಗಿ ನೇಮಿಸಿರುವ ಜನವರಿ 17ರ ಆದೇಶ ಪ್ರಶ್ನಿಸದ ಹೊರತು, ಮಸೀದಿ ಸಮಿತಿಯ ವಾದ ಆಲಿಸಲಾಗದು ಎಂದಿತು.

“ಪ್ರಕರಣದ ತುರ್ತು ವಿಚಾರಣೆ ಅಗತ್ಯವಿದೆ. ಹಿಂದೂ ಪಕ್ಷಕಾರರು ಈಗಾಗಲೇ ವ್ಯಾಸ್‌ ತೆಹ್‌ಖಾನಾದಲ್ಲಿ (ದಕ್ಷಿಣ ನೆಲಮಾಳಿಗೆ) ಪೂಜೆ ಆರಂಭಿಸಿದ್ದಾರೆ” ಎಂದು ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ ಪೀಠಕ್ಕೆ ಕೋರಿದರು. ಜಿಲ್ಲಾ ನ್ಯಾಯಾಲಯದ ಜನವರಿ 31ರ ಆದೇಶವನ್ನು ತುರ್ತಾಗಿ ಜಾರಿಗೊಳಿಸಿದ್ದು, ಗೊಂದಲದ ಪರಿಸ್ಥಿತಿ ನಿರ್ಮಾಣವಾಗಲು ಕಾರಣ. ಪೂಜೆಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದ ಸೂಚನೆಯಂತೆ ಆದೇಶ ಪ್ರಶ್ನಿಸಲಾಗುವುದು. ಆದರೆ, ಜನವರಿ 31ರ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಹಿಂದೂ ಪಕ್ಷಕಾರರನ್ನು ಪ್ರತಿನಿಧಿಸಿದ್ದ ವಕೀಲ ವಿಷ್ಣು ಜೈನ್‌ ಆಕ್ಷೇಪಿಸಿದರು.

Related Stories

No stories found.
Kannada Bar & Bench
kannada.barandbench.com