ಜನರಲ್ಲಿ ಭಯ ಬಿತ್ತಿ ಅಪಾರ ಸಂಪತ್ತು ಗಳಿಕೆ: ಮುಖ್ತಾರ್ ಅನ್ಸಾರಿಗೆ ಅಲಾಹಾಬಾದ್ ಹೈಕೋರ್ಟ್ ಜಾಮೀನು ನಿರಾಕರಣೆ

ಸುಮಾರು ಎರಡು ಡಜನ್‌ನಷ್ಟು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಜನ ಸತತ ಆರನೇ ಬಾರಿಗೆ ಚುನಾಯಿಸಿ ಕಳಹಿಸಿರುವುದು ಪ್ರಜಾಪ್ರಭುತ್ವದ ದುರದೃಷ್ಟಕರ ಮತ್ತು ಹೇಯ ಮುಖ ಎಂದು ನ್ಯಾಯಾಲಯ ಬಣ್ಣಿಸಿದೆ.
Mukhtar Ansari with Allahabad High Court
Mukhtar Ansari with Allahabad High Court
Published on

ಉತ್ತರ ಪ್ರದೇಶದ ದರೋಡೆಕೋರ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆ) ಕಾಯಿದೆ 1986ರ ಅಡಿ ದಾಖಲಿಸಲಾದ ಪ್ರಕರಣದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ಮುಖ್ತಾರ್ ಅನ್ಸಾರಿಗೆ ಜಾಮೀನು ನೀಡಲು ಅಲಾಹಾಬಾದ್ ಹೈಕೋರ್ಟ್ ಕಳೆದ ವಾರ ನಿರಾಕರಿಸಿದೆ. [ಮುಖ್ತಾರ್ ಅನ್ಸಾರಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅನ್ಸಾರಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್  “ಈಗಿನ ಆರೋಪಿ-ಅರ್ಜಿದಾರ (ಅನ್ಸಾರಿ ಕುರಿತು) ದರೋಡೆಕೋರನಲ್ಲದೇ ಹೋದರೆ, ಈ ದೇಶದಲ್ಲಿ ಯಾರನ್ನೂ ದರೋಡೆಕೋರರೆಂದು ಹೇಳಲು ಸಾಧ್ಯವಿಲ್ಲ. ಆತ ಮತ್ತು ಆತನ ಗುಂಪಿನ ಸದಸ್ಯರು ಜನರಲ್ಲಿ ಭೀತಿ ಬಿತ್ತುವ ಮೂಲಕ ಅಪಾರ ಸಂಪತ್ತು ಗಳಿಸಿದರು. ಆತನಿಗೆ ನೀಡುವ ಸ್ವಾತಂತ್ರ್ಯ ನಾಗರಿಕರಿಗೆ ಅಪಾಯ ತಂದೊಡ್ಡುವ ಕಾನೂನು ದುರಂತವಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.

Also Read
ಎರಡು ದಶಕಗಳ ಹಿಂದಿನ ಪ್ರಕರಣ: ಮುಖ್ತಾರ್ ಅನ್ಸಾರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಅಲಾಹಾಬಾದ್ ಹೈಕೋರ್ಟ್

“ಎರಡು ಡಜನ್‌ಗೂ ಹೆಚ್ಚು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ತಮ್ಮ ಪ್ರತಿನಿಧಿಯಾಗಿ ಸತತ ಆರು ಬಾರಿ ಆಯ್ಕೆ ಮಾಡುವುದು ನಮ್ಮ ಪ್ರಜಾಪ್ರಭುತ್ವದ ಅತ್ಯಂತ ದುರದೃಷ್ಟಕರ ಮತ್ತು ಹೇಯ ಮುಖವಾಗಿದೆ” ಎಂದು ನ್ಯಾಯಾಲಯ ಬಣ್ಣಿಸಿದೆ.

ಅನ್ಸಾರಿ ಮತ್ತವರ ಗ್ಯಾಂಗ್‌ 2014ರಲ್ಲಿ ಹಳ್ಳಿಯೊಂದಕ್ಕೆ ನುಗ್ಗಿ ಸ್ವಯಂಚಾಲಿತ ಬಂದೂಕುಗಳಿಂದ ಕಾರ್ಮಿಕರ ಮೇಲೆ ಗುಂಡು ಹಾರಿಸಿತ್ತು. ಘಟನೆಯಲ್ಲಿ ಕೆಲಸಗಾರನೊಬ್ಬ ಮೃತಪಟ್ಟು ಅನೇಕ ಕಾರ್ಮಿಕರು ಗಾಯಗೊಂಡಿದ್ದರು ಎನ್ನಲಾಗಿತ್ತು. ಐಪಿಸಿ ಸೆಕ್ಷನ್‌ ಸೆಕ್ಷನ್ 7 ಮತ್ತು ಉತ್ತರ ಪ್ರದೇಶದ ದರೋಡೆಕೋರ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆ) ಕಾಯಿದೆ- 1986. ಸೆಕ್ಷನ್ 147, 148, 149, 302, 307, 506 ಮತ್ತು 120-ಬಿ ಅಡಿಯಲ್ಲಿ ಅನ್ಸಾರಿ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Also Read
ಅನ್ಸಾರಿ ಜನರೊಳಗೆ ಭಯ ಬಿತ್ತುತ್ತಾರೆ, ಅಂತಹವರು ಶಾಸನ ರೂಪಿಸುವುದು ದುರಂತ: ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್

ಬೇರೊಂದು ಪ್ರಕರಣದಲ್ಲಿ ಇದೇ ಹೈಕೋರ್ಟ್‌ ಅನ್ಸಾರಿ ಅವರ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ನ್ಯಾಯಾಲಯ ಇದೇ ವೇಳೆ ಪ್ರಸ್ತಾಪಿಸಿತು. 2022ರ ಜೂನ್ 13 ರಂದು ಹೈಕೋರ್ಟ್ ನೀಡಿದ್ದ ಆದೇಶದಲ್ಲಿ “ಅನ್ಸಾರಿ ಒಬ್ಬ ಕುಖ್ಯಾತ ಅಪರಾಧಿಯಾಗಿದ್ದು ಉತ್ತರ ಭಾರತದಲ್ಲಿ ರಾಬಿನ್‌ ಹುಡ್‌ ಎಂದೇ ಆತನನ್ನು ಬಿಂಬಿಸಲಾಗುತ್ತದೆ. 1986 ರಿಂದ ಅಪರಾಧ ಜಗತ್ತಿನಲ್ಲಿರುವ ಕಠೋರ ಮತ್ತು ನಿರಂತರವಾಗಿ ಅಪರಾಧ ಎಸಗುತ್ತಾ ಬಂದಿದ್ದಾನೆ. ಹೇಯ ಎನ್ನುವಂತಹ 56ಕ್ಕೂ ಹೆಚ್ಚು ಪ್ರಕರಣಗಳನ್ನು ಆತ ಎಸಗಿದ್ದಾನೆ. ಎರಡು ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಯಾವ ಪ್ರಕರಣಗಳಲ್ಲೂ ತಮಗೆ ಶಿಕ್ಷೆಯಾಗದಂತೆ ನೋಡಿಕೊಂಡಿದ್ದಾರೆ” ಎಂದು ಹೇಳಿತ್ತು.

ಅನ್ಸಾರಿ ಖುಲಾಸೆಗೊಂಡರೆ ಸಾಕ್ಷಿಗಳಲ್ಲಿ ಭೀತಿ ಸೃಷ್ಟಿಸಬಹುದು ಎಂಬ ಕಾರಣಕ್ಕೆ ಆತನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು. ಜೈಲರ್‌ಗೆ ಪಿಸ್ತೂಲ್ ತೋರಿಸಿ 2003ರಲ್ಲಿ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಅನ್ಸಾರಿಗೆ ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠ 2022ರ ಸೆಪ್ಟೆಂಬರ್‌ನಲ್ಲಿ ಅನ್ಸಾರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಈ ವರ್ಷದ ಜನವರಿ 2ರಂದು ಸುಪ್ರೀಂ ಕೋರ್ಟ್ ಈ ಆದೇಶ ಜಾರಿಗೆ ತಡೆ ನೀಡಿತ್ತು.

Kannada Bar & Bench
kannada.barandbench.com