ಸುರಕ್ಷತೆಯ ಕಾಳಜಿ: ಪುರುಷ ಜಿಮ್ ಕೋಚ್‌ಗಳು ಮಹಿಳೆಯರಿಗೆ ತರಬೇತಿ ನೀಡುವ ಕುರಿತು ಅಲಾಹಾಬಾದ್ ಹೈಕೋರ್ಟ್ ಆತಂಕ

"ಪ್ರಸ್ತುತ ಮಹಿಳಾ ಗ್ರಾಹಕರ ಸುರಕ್ಷತೆ ಮತ್ತು ಘನತೆಗೆ ಸಂಬಂಧಿಸಿದಂತೆ ಸಾಕಷ್ಟು ಸುರಕ್ಷತಾ ಕ್ರಮ ಇಲ್ಲದೆ ಪುರುಷ ಜಿಮ್ ತರಬೇತುದಾರರು ತರಬೇತಿ ನೀಡುತ್ತಿರುವುದು ಗಂಭೀರ ಕಳವಳಕಾರಿ ಸಂಗತಿ" ಎಂದು ನ್ಯಾಯಾಲಯ ಹೇಳಿದೆ.
Gym
Gym
Published on

ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೆ ಜಿಮ್‌ಗಳಲ್ಲಿ ಪುರುಷ ತರಬೇತುದಾರರು ಮಹಿಳೆಯರಿಗೆ ತರಬೇತಿ ನೀಡುತ್ತಿರುವ ಬಗ್ಗೆ ಅಲಾಹಾಬಾದ್‌ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ [ನಿತಿನ್ ಸೈನಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಜಿಮ್ ತರಬೇತುದಾರರೊಬ್ಬರು ಜಾತಿ ಆಧಾರಿತ ಅಶ್ಲೀಲ ಪದ ಬಳಸಿ ಮಹಿಳಾ ಗ್ರಾಹಕರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್  ಈ ವಿಚಾರ ತಿಳಿಸಿದರು.

Also Read
ಪೋಶ್ ಕಾಯಿದೆ ವ್ಯಾಪ್ತಿಗೆ ವಕೀಲರನ್ನು ತರಲು ಕೋರಿಕೆ: ಬಿಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

"ಪ್ರಸ್ತುತ ಮಹಿಳಾ ಗ್ರಾಹಕರ ಸುರಕ್ಷತೆ ಮತ್ತು ಘನತೆಗೆ ಸಂಬಂಧಿಸಿದಂತೆ ಸಾಕಷ್ಟು ಸುರಕ್ಷತಾ ಕ್ರಮಗಳಿಲ್ಲದೆ ಪುರುಷ ಜಿಮ್ ತರಬೇತುದಾರರು ತರಬೇತಿ ನೀಡುತ್ತಿರುವುದು ಕಳವಳಕಾರಿ ಸಂಗತಿ" ಎಂದು ನ್ಯಾಯಾಲಯ ಹೇಳಿದೆ.

ಕಳೆದ ವರ್ಷ ಐಪಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಜಿಮ್ ತರಬೇತುದಾರ ನಿತಿನ್ ಸೈನಿ ಎಂಬಾತ ಸಂತ್ರಸ್ತೆಯ ಜಾತಿ ಉಲ್ಲೇಖಿಸಿ ನಿಂದಿಸಿದ್ದಲ್ಲದೆ ಆಕೆಯನ್ನು ಹೊರಗೆ ತಳ್ಳಿದ್ದ. ಜೊತೆಗೆ ಆಕೆಯ ಸ್ನೇಹಿತೆಯ ಅಶ್ಲೀಲ ವಿಡಿಯೋಗಳನ್ನು ಮಾಡಿದ್ದ ಎಂದು ಆರೋಪಿಸಲಾಗಿತ್ತು.

Also Read
ಪೋಶ್ ಕಾಯಿದೆಯ ದುರುಪಯೋಗ ಅಪಾಯಕಾರಿ: ನ್ಯಾ. ಎನ್ ಕೋಟೀಶ್ವರ್ ಸಿಂಗ್

ವಾದ ಆಲಿಸಿದ ನ್ಯಾಯಾಲಯ ಸಂಬಂಧಿತ ಜಿಮ್ ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದೆಯೇ? ಆರೋಪಿ ತರಬೇತುದಾರನನ್ನು ಬಂಧಿಸಲಾಗಿದೆಯೇ? ಹಾಗೂ ಜಿಮ್‌ನಲ್ಲಿ ಮಹಿಳಾ ತರಬೇತುದಾರರ ನೇಮಕಾತಿ ಮಾಡಿಕೊಳ್ಳಲಾಗಿತ್ತೆ ಎಂಬ ಕುರಿತು ವಿವರಗಳನ್ನು ಒದಗಿಸುವಂತೆ ಪೊಲೀಸರಿಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 8ರಂದು ನಡೆಯಲಿದೆ.

ಆರೋಪಿಗಳ ಪರವಾಗಿ ವಕೀಲ ಚಂದ್ರ ಭನ್ ವಾದ ಮಂಡಿಸಿದರು. ಉತ್ತರ ಪ್ರದೇಶ ಸರ್ಕಾರವನ್ನು ವಕೀಲ ದಿನೇಶ್ ಕುಮಾರ್ ಯಾದವ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com