PUBG
PUBG

ಪಬ್‌ಜಿ ಆಡಲು ಬಿಡದ ತಾಯಿಯನ್ನು ಕೊಂದ ಆರೋಪ ಎದುರಿಸುತ್ತಿದ್ದ ಬಾಲಕನಿಗೆ ಅಲಾಹಾಬಾದ್ ಹೈಕೋರ್ಟ್ ಜಾಮೀನು

ವರದಿಗಳ ಪ್ರಕಾರ ಆನ್‌ಲೈನ್‌ ಗೇಮ್ ಆಡಲು ಅಡ್ಡಿಪಡಿಸಿದ್ದ ತಾಯಿಯನ್ನು ತನ್ನ ತಂದೆಯ ಪರವಾನಗಿಯುಕ್ತ ಬಂದೂಕು ಬಳಸಿ ಬಾಲಾಪರಾಧಿ ಜೂನ್ 2022 ರಲ್ಲಿ ಕೊಂದಿದ್ದ.

ಆನ್‌ಲೈನ್‌ ಮೊಬೈಲ್‌ ಗೇಮ್‌ ಪಬ್‌ಜಿ ಆಡಲು ಬಿಡದ ತನ್ನ ತಾಯಿಯನ್ನು ತಂದೆಯ ಪರವಾನಗಿಯುಕ್ತ ಪಿಸ್ತೂಲ್‌ ಬಳಸಿ ಕೊಂದಿದ್ದ ಆರೋಪ ಎದುರಿಸುತ್ತಿರುವ 16 ವರ್ಷದ ಬಾಲಕನಿಗೆ ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಜಾಮೀನು ನೀಡಿದೆ.

ಆರೋಪಿ ಬಾಲಾಪರಾಧಿಯಾಗಿದ್ದು ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಮೂರ್ತಿ ಶ್ರೀ ಪ್ರಕಾಶ್‌ ಸಿಂಗ್‌ ಅವರು ಆರೋಪಿಗೆ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಕೃತ್ಯ ನಡೆದ ದಿನ ಆರೋಪಿಗೆ 16 ವರ್ಷ 8 ತಿಂಗಳು ಮತ್ತು 7 ದಿನಗಳಾಗಿದ್ದವು. ಅದು ಬಾಲ ನ್ಯಾಯ ಮಂಡಳಿಯ ದೋಷಾರೋಪ ಆದೇಶದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಅರ್ಜಿದಾರ ಬಾಲಾಪರಾಧಿ ಎಂದು ದೃಢಪಟ್ಟಿದೆ. ಇಲ್ಲಿಯರವರೆಗೆ ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ಅರ್ಜಿದಾರನ ಅಜ್ಜಿ ಎಫ್‌ಐಆರ್‌ ದಾಖಲಿಸಿದ್ದು ಆಕೆ ಪ್ರತ್ಯಕ್ಷದರ್ಶಿ ಅಲ್ಲ. ಉಳಿದ ಸಾಕ್ಷಿಗಳು ಕೂಡ ಪ್ರತ್ಯಕ್ಷದರ್ಶಿಗಳಲ್ಲ ಹೇಳಿಕೆ-ಕೇಳಿಕೆ ಆಧಾರದಲ್ಲಿ ಸಾಕ್ಷ್ಯ ನುಡಿದಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು.

ತನ್ನ ಜಾಮೀನು ಅರ್ಜಿ ತಿರಸ್ಕರಿಸಿದ್ದ ಲಖನೌನ ಪೋಕ್ಸೊ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ತೀರ್ಪನ್ನು ಪ್ರಶ್ನಿಸಿ ಕಾನೂನು ಸಂಘರ್ಷ ಎದುರಿಸುತ್ತಿರುವ ಬಾಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು.

Also Read
ಜುಬಿಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ: ನಾಲ್ವರು ಅಪ್ರಾಪ್ತರನ್ನು ವಯಸ್ಕರಂತೆ ಪರಿಗಣಿಸಲು ಬಾಲ ನ್ಯಾಯ ಮಂಡಳಿ ಸೂಚನೆ

ವರದಿಗಳ ಪ್ರಕಾರ ಪಬ್‌ಜಿ ಸೇರಿದಂತೆ ಆನ್‌ಲೈನ್‌ ಗೇಮ್‌ಗಳನ್ನು ಆಡಲು ಅಡ್ಡಿಪಡಿಸಿದ್ದ ತಾಯಿಯನ್ನು ತನ್ನ ತಂದೆಯ ಪರವಾನಗಿಯುಕ್ತ ಬಂದೂಕು ಬಳಸಿ ಬಾಲಾಪರಾಧಿ ಜೂನ್ 2022 ರಲ್ಲಿ ಕೊಂದಿದ್ದ. ಘಟನೆ ನಡೆದ ಎರಡು ದಿನಗಳ ಬಳಿಕ ಮೃತ ತಾಯಿಯ ಶವ ಪತ್ತೆಯಾಗಿತ್ತು.

ಬಿಡುಗಡೆ ಮಾಡಿದರೆ ಆತ ಅನಾಮಿಕ ಅಪರಾಧಿಗಳ ಸಂಪರ್ಕಕ್ಕೆ ಬರುವುದಿಲ್ಲ, ಇಲ್ಲವೇ ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯಕ್ಕೆ ತನ್ನನ್ನು ಒಡ್ಗಡಿಕೊಳ್ಳುವುದಿಲ್ಲ ಎಂದು ಮನವರಿಕೆಯಾದ ಬಳಿಕ ನ್ಯಾಯಾಲಯ ಬಾಲಾಪರಾಧಿಗೆ ಜಾಮೀನು ನೀಡಿತು.

ಜಾಮೀನು ನೀಡುವ ಸಂದರ್ಭದಲ್ಲಿ, ಬಾಲಾಪರಾಧಿ ಆರೋಪಿಯು ಜೂನ್ 8, 2022 ರಿಂದ ಮಕ್ಕಳ ರಕ್ಷಣಾ ಗೃಹದಲ್ಲಿರುವುದನ್ನು ಹಾಗೂ ಆತನ  ತಂದೆ ತನ್ನ ಮಗನ ಮೇಲೆ ನಿಗಾ ಇರಿಸಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿರುವುದನ್ನು ನ್ಯಾಯಾಲಯ ಗಮನಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Juvenile__X___Minor__Thru__His_Father_v__State_of_Uttar_Pradesh_Through_Additional_Chief_Secretary__.pdf
Preview

Related Stories

No stories found.
Kannada Bar & Bench
kannada.barandbench.com