ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೈರಸ್‌ನಂತಿದ್ದು ದೇಶಕ್ಕೆ ತುರ್ತು ವಿಷ ನಿವಾರಕದ (ಆಂಟಿಡೋಟ್) ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಸಾರ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ರಕ್ಷಣೆ ನೀಡಿದೆ [ಮೊಹಮ್ಮದ್. ಫರ್ಹಾನ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತನ್ನ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2008ರ ಸೆಕ್ಷನ್ 66ರಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮೊಹಮ್ಮದ್ ಫರ್ಹಾನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ.
ಮೇಲ್ನೋಟಕ್ಕೆ ಆರೋಪಿಯ ಆಪಾದಿತ ಹೇಳಿಕೆಗಳು 1860ರ ಐಪಿಸಿ ಸೆಕ್ಷನ್ 504ರ (ಶಾಂತಿ ಭಂಗ ಮಾಡುವ ಸಲುವಾಗಿ ಮಾಡಿದ ಉದ್ದೇಶಪೂರ್ವಕ ಅಪಮಾನ) ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಂಜನಿ ಕುಮಾರ್ ಮಿಶ್ರಾ ಮತ್ತು ನಂದ ಪ್ರಭಾ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಹೇಳಿತು.
ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ಅಥವಾ ಪೊಲೀಸರು ತಮ್ಮ ಆರೋಪಪಟ್ಟಿ ಸಲ್ಲಿಸುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಅರ್ಜಿದಾರ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ನಿರ್ದೇಶಿಸಿದೆ.
ತನಿಖೆಗೆ ಅರ್ಜಿದಾರರು ಸಂಪೂರ್ಣ ಸಹಕರಿಸಬೇಕು ವಿಫಲವಾದರೆ ನ್ಯಾಯಾಲಯ ನೀಡಿರುವ ರಕ್ಷಣೆಗೆ ಅವರು ಅರ್ಹರಾಗುವುದಿಲ್ಲ ಎಂದು ಕೂಡ ಅದು ಹೇಳಿದೆ.