ದಿಶಾ ಪ್ರಕರಣ: ತನಿಖೆಗೆ ಅಡ್ಡಿಯಾಗದಂತೆ ಸಂಪಾದಕೀಯ ನಿಯಂತ್ರಣ ಸಾಧಿಸಲು ಚಾನೆಲ್‌ ಸಂಪಾದಕರಿಗೆ ದೆಹಲಿ ಹೈಕೋರ್ಟ್‌ ಸೂಚನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ನಡೆಸುವಾಗ ಅವರಿಗೆ ಕೆಟ್ಟ ಹೆಸರು ತರುವ ಕೃತ್ಯದಲ್ಲಿ ತೊಡಗದಂತೆ ತಮ್ಮ ಸಂಪರ್ಕದಲ್ಲಿರುವವರಿಗೆ ಸೂಚಿಸಲು ಸಹ ದಿಶಾ ರವಿಗೆ ನ್ಯಾಯಾಲಯ ನಿರ್ದೇಶಿಸಿದೆ.
Disha ravi, Delhi high court
Disha ravi, Delhi high court
Published on

ರೈತರ ಪ್ರತಿಭಟನೆಗೆ ಸಂಬಂಧಿಸಿದ ಪೊಲೀಸ್‌ ವಶದಲ್ಲಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಕುರಿತಾದ ಟೂಲ್‌ಕಿಟ್‌ ಪ್ರಕರಣದ ತನಿಖೆಗೆ ಸಮಸ್ಯೆಯಾಗದಂತೆ ವರದಿಗಾರಿಕೆ ಮಾಡುವಾಗ ನಿಯಂತ್ರಣ ಸಾಧಿಸಲು ವಿವಿಧ ಸುದ್ದಿ ವಾಹಿನಿಗಳ‌ ಸಂಪಾದಕರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ನಡೆಸುವಾಗ ಅವರ ಹೆಸರಿಗೆ ಕೆಟ್ಟ ಹೆಸರು ತರುವ ಕೃತ್ಯದಲ್ಲಿ ತೊಡಗದಂತೆ ತಮ್ಮ ಸಂಪರ್ಕಿದಲ್ಲಿರುವವರಿಗೆ ಸೂಚಿಸಲು ಸಹ ಇದೇ ವೇಳೆ ದಿಶಾ ರವಿ ಅವರಿಗೂ ನ್ಯಾಯಾಲಯ ನಿರ್ದೇಶಿಸಿದೆ.

ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಹೊರಡಿಸಿದ್ದು, ಕೆಳಗಿನ ನಿರ್ದೇಶನಗಳನ್ನು ನೀಡಿದೆ:

  • ದೆಹಲಿ ಪೊಲೀಸರು ಇಂದು ಸಲ್ಲಿಸಿರುವ ಅಫಿಡವಿಟ್‌ಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ. ಅಫಿಡವಿಟ್‌ನಲ್ಲಿ ಪೊಲೀಸರು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಕೆ ಸೋರಿಕೆ ಮಾಡಿಲ್ಲ. ಅಲ್ಲದೇ ಮಾಡುವ ಉದ್ದೇಶವನ್ನೂ ಹೊಂದಿಲ್ಲ ಎಂದಿದ್ದಾರೆ. ಪತ್ರಿಕಾಗೋಷ್ಠಿಗೆ ಸಂಬಂಧಿಸಿದ ಏಪ್ರಿಲ್ 1, 2010ರ ಕಚೇರಿ ಜ್ಞಾಪಕ ಪತ್ರವನ್ನು ಸಹ ಪಾಲಿಸಬೇಕಾಗುತ್ತದೆ. ದೆಹಲಿ ಪೊಲೀಸರು ಕಾನೂನಿನ ಪ್ರಕಾರ ಪತ್ರಿಕಾಗೋಷ್ಠಿ ನಡೆಸಬಹುದಾಗಿದೆ.

  • ಮಾಹಿತಿ ಭಿತ್ತರಿಸುವಾಗ ಪರಿಶೀಲಿಸಿದ, ದೃಢೀಕೃತ ಮಾಹಿತಿ ಪ್ರಸಾರ ಮಾಡುವುದನ್ನು ಮಾಧ್ಯಮಗಳು ಖಾತರಿಪಡಿಸಬೇಕು. ಮಾಹಿತಿಯ ಮೂಲವನ್ನು ತಿಳಿಸುವಂತೆ ಈಗ ಕೇಳುವುದಿಲ್ಲ. ಪರಿಶೀಲಿಸಲಾದ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಲಾಗುತ್ತದೆ ಎಂಬುದನ್ನು ಸಂಪಾದಕೀಯ ತಂಡ ಖಾತರಿಪಡಿಸಬೇಕು. ಯಾವುದೇ ರೀತಿಯಲ್ಲಿ ತನಿಖೆಗೆ ಅಡ್ಡಿಯಾಗದಂತೆ ಸರಿಯಾದ ಸಂಪಾದಕೀಯ ನಿಯಂತ್ರಣವನ್ನು ಚಾನೆಲ್ ಸಂಪಾದಕರು ಖಚಿತಪಡಿಸಿಕೊಳ್ಳಬೇಕು.

  • ಒಮ್ಮೆ ಆರೋಪಪಟ್ಟಿ ಸಲ್ಲಿಸಿದ ಬಳಿಕ ಯಾವುದೇ ಕಾರಣಕ್ಕೂ ಪ್ರಕರಣದ ವರದಿಗಾರಿಕೆ ಮಾಡಬಾರದು.

  • ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ನಡೆಸುವಾಗ ಅವರ ಹೆಸರಿಗೆ ಕೆಟ್ಟ ಹೆಸರು ತರುವ ಕೃತ್ಯದಲ್ಲಿ ತೊಡಗದಂತೆ ತಮ್ಮ ಸಂಪರ್ಕಿದಲ್ಲಿರುವವರಿಗೆ ಸೂಚಿಸಲು ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಇದರಿಂದ ವಾದಿ-ಪ್ರತಿವಾದಿಗಳು ತನಿಖೆಗೆ ಹಾನಿ ಮಾಡುವುದಿಲ್ಲ. ಅರ್ಜಿದಾರರಿಗೆ ಅಥವಾ ಸಂಪರ್ಕಿತ ವ್ಯಕ್ತಿಗಳಿಂದ ಅಂತಹ ಯಾವುದೇ ವಿಷಯವನ್ನು ಹೊರಹಾಕಲಾಗಿಲ್ಲ ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಾಲಯವು ಗಮನಿಸಿದೆ. ಆ ಕೃತ್ಯ ಎಸಗುವ ಯಾವುದೇ ಉದ್ದೇಶ ಅವರಿಗಿಲ್ಲ ಎಂದು ಹೇಳಲಾಗಿದೆ.

ಮುಂದಿನ ಹಂತದಲ್ಲಿ ಪ್ರಶ್ನಾರ್ಹವಾದ ಆನ್‌ಲೈನ್‌ನಲ್ಲಿರುವ ವಿಷಯವನ್ನು ತೆಗೆದುಹಾಕುವ ವಿಚಾರವನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. “ಪ್ರಪಂಚದಾದ್ಯಂತ ವಿಷಯದ ನಿಯಂತ್ರಣ ವಿಚಾರವು ಪ್ರಶ್ನಾರ್ಹವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ… ತಮ್ಮ ಸುದ್ದಿಯ ಮೂಲ ಬಹಿರಂಗಪಡಿಸುವಂತೆ ಪತ್ರಕರ್ತರನ್ನು ಕೇಳಲಾಗದು. ಆದರೆ, ಅವರ ಸುದ್ದಿ ಮೂಲಗಳು ಅಧಿಕೃತ ಮತ್ತು ಪರಿಶೀಲಿಸಲ್ಪಟ್ಟಿರುವಂತಹವು ಎಂಬುದನ್ನು ಖಾತರಿಪಡಿಸಬೇಕು…” ಎಂದು ನ್ಯಾಯಾಲಯ ಹೇಳಿದೆ.

Also Read
[ಟೂಲ್‌ಕಿಟ್‌ ಪ್ರಕರಣ] ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಎಫ್ಐಆರ್ ಪ್ರತಿ ನೀಡುವಂತೆ ಸೂಚಿಸಿದ ದೆಹಲಿ ನ್ಯಾಯಾಲಯ

“ಯಾವುದೇ ತೆರನಾದ ಉದ್ರೇಕ ಉಂಟುಮಾಡುವ ವಿಚಾರದಲ್ಲಿ ಮಾಧ್ಯಮಗಳು ಮಹತ್ವದ ಪಾತ್ರವಹಿಸುತ್ತವೆ. ಅವರು ಜವಾಬ್ದಾರಿಯುತ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಇತ್ತೀಚೆಗಿನ ಪತ್ರಿಕೋದ್ಯಮದಲ್ಲಿ ಉದ್ರೇಕಕಾರಿ ಮತ್ತು ಪೂರ್ವಗ್ರಹಪೀಡಿತವಾದ ನಿಲುವನ್ನು ಮಾಧ್ಯಮ ಸಂಸ್ಥೆಗಳು ಪ್ರಸ್ತುತಪಡಿಸುತ್ತಿವೆ” ಎಂದು ಪೀಠ ಹೇಳಿದೆ.

“ಅರ್ಜಿದಾರರ ಖಾಸಗಿತನ/ಘನತೆ, ಸಾರ್ವಭೌಮತೆ/ಸಮಗ್ರತೆ ಮತ್ತು ವಾಕ್‌ ಸ್ವಾತಂತ್ರ್ಯದಂಥ ಮೂರು ವಿಚಾರಗಳನ್ನು ಸಂರಕ್ಷಿಸಿ ಅವುಗಳ ನಡುವೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಹಕ್ಕಿನ ಜೊತೆ ವ್ಯಕ್ತಿಗತ ಹಕ್ಕಿನ ಸಮನ್ವಯತೆ ಸಾಧಿಸಬೇಕಿದೆ” ಎಂದು ನ್ಯಾಯಮೂರ್ತಿ ಸಿಂಗ್‌ ಹೇಳಿದ್ದಾರೆ.

ದಿಶಾ ಪರ ಹಿರಿಯ ವಕೀಲ ಅಖಿಲ್‌ ಸಿಬಲ್‌, ದೆಹಲಿ ಪೊಲೀಸ್‌ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು, ಎನ್‌ಬಿಎಸ್‌ಎ ಪರ ನಿಶಾ ಭಂಭಾನಿ, ನ್ಯೂಸ್‌ 18ರ ಪರ ಮೃನಾಲ್‌ ಭಾರ್ತಿ, ಇಂಡಿಯಾ ಟುಡೇ ಪರ ಹೃಷಿಕೇಶ್‌ ಬರುವಾ, ಟೈಮ್ಸ್‌ ನೌ ಪರ ಕುನಾಲ್‌ ಟಂಡನ್‌, ಹೆಚ್ಚುವರಿ ಸಾಲಿಸಿಟರ್‌ ಜನರಲ್ ಚೇತನ್‌ ಶರ್ಮಾ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು. ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಲಾಗಿದೆ.

ಟೂಲ್‌ಕಿಟ್‌ ಪ್ರಕರಣದ ಕುರಿತು ಎಫ್‌ಐಆರ್‌ ದಾಖಲಿಸಿರುವ ದೆಹಲಿ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡದಂತೆ ನಿರ್ಬಂಧ ವಿಧಿಸಿ ಆದೇಶಿಸಬೇಕು ಎಂದು ದಿಶಾ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

Kannada Bar & Bench
kannada.barandbench.com