ಜಮ್ಮು- ಕಾಶ್ಮೀರದಾಚೆಯ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳು ವಾಪಸ್: ಹೈಕೋರ್ಟ್ ಮೆಟ್ಟಿಲೇರಿದ ಮೆಹಬೂಬಾ ಮುಫ್ತಿ
ಪ್ರಸ್ತುತ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಹೊರಗಿನ ಜೈಲುಗಳಲ್ಲಿರುವ ಜಮ್ಮು ಕಾಶ್ಮೀರದ ವಿಚಾರಣಾಧೀನ ಕೈದಿಗಳನ್ನು ಕೇಂದ್ರಾಡಳಿತ ಪ್ರದೇಶದ ಜೈಲುಗಳಿಗೆ ವಾಪಸ್ ಕರೆಸಿಕೊಳ್ಳಲು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ತುರ್ತು ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ [ಮೆಹಬೂಬಾ ಮುಫ್ತಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಜಮ್ಮು ಕಾಶ್ಮೀರದ ವಿಚಾರಣಾಧೀನ ಕೈದಿಗಳನ್ನು ಅಲ್ಲಿಂದ ನೂರಾರು ಕಿಮೀ ದೂರದಲ್ಲಿ ಬಂಧಿಸಿಟ್ಟಿರುವುದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆ ಎಂದು ಮುಫ್ತಿ ವಾದಿಸಿದ್ದಾರೆ.
ಹೀಗೆ ಬಂಧಿಸಿಟ್ಟಿರುವುದರಿಂದ ಅವರು ಕುಟುಂಬ ಸದಸ್ಯರನ್ನು ಭೇಟಿಯಾಗುವ ಹಕ್ಕು,ವಕೀಲರನ್ನು ಭೇಟಿಯಾಗುವ ಅವಕಾಶ ಕೈತಪ್ಪಿದ್ದು ನ್ಯಾಯಪ್ರಕ್ರಿಯೆಯಲ್ಲಿ ಸೂಕ್ತ ರೀತಿಯಲ್ಲಿ ಪಾಲ್ತೊಂಡು ತ್ವರಿತ ನ್ಯಾಯ ಪಡೆಯಲು ಅಡಚಣೆಯುಂಟಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಪ್ರಕರಣದ ವಿಚಾರಣೆಯ ದಿನ ಇನಷ್ಟೇ ನಿಗದಿಯಾಗಬೇಕಿದೆ.
ಅರ್ಜಿಯ ಪ್ರಮುಖಾಂಶಗಳು
ಸಂವಿಧಾನದ 370ನೇ ವಿಧಿ ರದ್ದಾಗಿ 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಬಳಿಕ ಜಮ್ಮು ಕಾಶ್ಮೀರದಲ್ಲಿಯೇ ಪ್ರಕರಣ ದಾಖಲಾಗಿದ್ದರೂ ವಿಚಾರಣಾಧೀನ ಕೈದಿಗಳನ್ನು ಹೊರರಾಜ್ಯದ ದೂರದ ಜೈಲುಗಳಲ್ಲಿ ಇರಿಸಲಾಗಿದೆ.
ಇದರಿಂದ ಕುಟುಂಬ ಸದಸ್ಯರ ಭೇಟಿ, ವಕೀಲರ ಸಂಪರ್ಕ ಕಷ್ಟವಾಗಿದ್ದು ನ್ಯಾಯ ಪ್ರಕ್ರಿಯೆಯಲ್ಲಿ ಅವರು ಸಮರ್ಪಕವಾಗಿ ಪಾಲ್ಗೊಳ್ಳಲು ಸಾಧ್ಯವಾಗದೆ ವಿಚಾರಣೆ ಪ್ರಕ್ರಿಯೆಯೇ ಶಿಕ್ಷೆಯಾಗಿ ಪರಿಣಮಿಸಿದೆ.
ಅನೇಕ ಪ್ರಕರಣಗಳಲ್ಲಿ ಸಾಕ್ಷ್ಯಗಳ ಪ್ರಮಾಣ ದೊಡ್ಡದಾಗಿದ್ದು ಸಾಕ್ಷಿದಾರರ ಪಟ್ಟಿಯೂ ದೊಡ್ಡದಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ವಕೀಲ ಮತ್ತು ಆರೋಪಿ ನಿರಂತರವಾಗಿ ಚರ್ಚೆ ನಡೆಸುವುದು ಅಗತ್ಯವಾಗುತ್ತದೆ. ಆದರೆ ಆರೋಪಿಯನ್ನು ದೂರದ ರಾಜ್ಯದ ಜೈಲಿನಲ್ಲಿ ಇರಿಸಿದ್ದರೆ, ಈ ರೀತಿಯ ಸಮಾಲೋಚನೆಗಳು ವಾಸ್ತವದಲ್ಲಿ ಸಾಧ್ಯವಾಗುವುದೇ ಇಲ್ಲ.
ಹೀಗೆ ಮಾಡಿರುವುದು ರಾಷ್ಟ್ರೀಯ ಕಾನೂನುಗಳಿಗೂ, ಅಂತಾರಾಷ್ಟ್ರೀಯ ಮಾನವ ಹಕ್ಕು ಮಾನದಂಡಗಳಿಗೂ ವಿರುದ್ಧ.
ವಿಚಾರಣಾಧೀನ ಕೈದಿಗಳೊಡನೆ ಮಾನವೀಯವಾಗಿ ವರ್ತಿಸಬೇಕು ಎಂದಿರುವ ಹಾಗೂ ಅವರಿಗೆ ವಿವಿಧ ಹಕ್ಕುಗಳನ್ನು ಒದಗಿಸಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ವಿವಿಧ ತೀರ್ಪುಗಳು ಮತ್ತು ಮಾದರಿ ಜೈಲು ಕೈಪಿಡಿಯನ್ನು ಪಾಲಿಸಬೇಕು.


