ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶಿಸಿದ ನ್ಯಾಯಾಧೀಶರಿಗೆ ಬೆದರಿಕೆ: ಅಲಾಹಾಬಾದ್ ಹೈಕೋರ್ಟ್ ಮಾಹಿತಿ

ನ್ಯಾ. ರವಿಕುಮಾರ್ ದಿವಾಕರ್ ಅವರನ್ನು ಕೊಲ್ಲಲು ಇಸ್ಲಾಮಿಕ್ ಮೂಲಭೂತವಾದಿ ಶಕ್ತಿಗಳು ಪಿತೂರಿ ನಡೆಸುತ್ತಿರುವುದನ್ನು ಭಯೋತ್ಪಾದನಾ ನಿಗ್ರಹ ದಳ ನಡೆಸುತ್ತಿರುವ ತನಿಖೆ ಬಹಿರಂಗಪಡಿಸಿರುವುದಾಗಿ ನ್ಯಾಯಾಧೀಶ ತ್ರಿಪಾಠಿ ಪತ್ರದಲ್ಲಿ ತಿಳಿಸಿದ್ದಾರೆ.
Gyanvapi Mosque
Gyanvapi Mosque

ಜ್ಞಾನವಾಪಿ ಮಸೀದಿ ಆವರಣದ ವೀಡಿಯೊ ಸಮೀಕ್ಷೆಗೆ 2022ರಲ್ಲಿ ಆದೇಶಿಸಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಭದ್ರತೆ ಒದಗಿಸುವಂತೆ ಕೋರಿ ಲಖನೌ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಲಾಹಾಬಾದ್‌ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪತ್ರ ಬರೆದಿದ್ದಾರೆ.

ನ್ಯಾ. ರವಿಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಮತ್ತು ಯುಎಪಿಎಯ ವಿವಿಧ ಸೆಕ್ಷನ್‌ಗಳಡಿ ಅದ್ನಾನ್ ಖಾನ್ ಎಂಬಾತನ ವಿರುದ್ಧ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ದಾಖಲಿಸಿದ್ದ ಎಫ್‌ಐಆರ್‌ ಅನ್ನು ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ವಿವೇಕಾನಂದ ಶರಣ್ ತ್ರಿಪಾಠಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ದೇವತಾ ಮೂರ್ತಿಗಳಿವೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ವೀಡಿಯೊ ಮಾಡಲು ಮತ್ತು ಸಾಕ್ಷ್ಯ ಸಂಗ್ರಹಿಸಲು 2022ರಲ್ಲಿ, ನ್ಯಾಯಾಧೀಶ ದಿವಾಕರ್ ಅವರು ಕೋರ್ಟ್‌ ಕಮಿಷನರ್‌ ಅವರಿಗೆ ಅವಕಾಶ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ದಿವಾಕರ್ ಅವರನ್ನು ಕೊಲ್ಲಲು ಇಸ್ಲಾಂ ಮೂಲಭೂತವಾದಿ ಶಕ್ತಿಗಳು ಪಿತೂರಿ ನಡೆಸಿರುವುದನ್ನು ಅದ್ನಾನ್ ಇನ್‌ಸ್ಟಾಗ್ರಾಂ ಖಾತೆ ಬಹಿರಂಗಪಡಿಸಿದೆ ಎಂದು ಭಯೋತ್ಪಾದನಾ ನಿಗ್ರಹ ದಳದ ತನಿಖೆಯಿಂದ ತಿಳಿದುಬಂದಿರುವುದಾಗಿ ನ್ಯಾ. ತ್ರಿಪಾಠಿ ಪತ್ರದಲ್ಲಿ ವಿವರಿಸಿದ್ದಾರೆ.

ಅದ್ನಾನ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನ್ಯಾಯಾಧೀಶರ ಫೋಟೊವನ್ನು ಪ್ರಕಟಿಸಿ ಕಾಫಿರ್‌ ಎಂದು ಕರೆದಿದ್ದಾನೆ. ಅಲ್ಲದೆ ನ್ಯಾಯಾಧೀಶರ ಮುಖದ ಮೇಲೆ ಕೆಂಪು ಬಣ್ಣದಿಂದ ಬರೆಯಲಾಗಿದೆ. ಈ ಪೋಸ್ಟನ್ನು ಅನೇಕರು ನೋಡಿದ್ದು ನ್ಯಾಯಾಧೀಶರನ್ನು ಕೊಲ್ಲಲು ಈ ಮೂಲಕ ಕುಮ್ಮಕ್ಕು ನೀಡಲಾಗಿದೆ. ಈ ಪೋಸ್ಟ್‌ ಮೂಲಕ ಉಳಿದ ಧರ್ಮದ ಜನರ ಭಾವನೆಗಳಿಗೆ ಧಕ್ಕೆ ಒದಗಿದೆ. ಇದು ಸಮುದಾಯಗಳ ನಡುವೆ ದ್ವೇಷಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕ್ರಮ ಕೈಗೊಳ್ಳದಿದ್ದರೆ ಅಹಿತಕರ ಘಟನೆ ಸಂಘವಿಸಬಹುದು ಎಂದು ಕೂಡ ನ್ಯಾ. ತ್ರಿಪಾಠಿ ಎಚ್ಚರಿಸಿದ್ದಾರೆ.

Kannada Bar & Bench
kannada.barandbench.com