ಇಂದಿರಾ ಅವರನ್ನು ಅನರ್ಹಗೊಳಿಸಿದ್ದ ಅಲಾಹಾಬಾದ್ ಹೈಕೋರ್ಟ್‌ ತೀರ್ಪು ದೇಶವನ್ನೇ ಅಲ್ಲಾಡಿಸಿದ ದಿಟ್ಟ ತೀರ್ಪು: ಸಿಜೆಐ

ರಾಷ್ಟ್ರಕ್ಕೆ ಹಾಗೂ ವಕೀಲ ವರ್ಗಕ್ಕೆ ನೀಡಿದ ಕೊಡುಗೆಗಾಗಿ ಅಲಾಹಾಬಾದ್ ಹೈಕೋರ್ಟ್‌ನ ವಕೀಲ ಸಮುದಾಯ ಮತ್ತು ನ್ಯಾಯಮೂರ್ತಿಗಳನ್ನು ಸಿಜೆಐ ಮನಸಾರೆ ಶ್ಲಾಘಿಸಿದರು.
CJI NV Ramana, Allahabad HC
CJI NV Ramana, Allahabad HC

ಚುನಾವಣಾ ಅಕ್ರಮಗಳ ಕಾರಣದಿಂದಾಗಿ ಇಂದಿರಾ ಗಾಂಧಿಯವರ ಆಯ್ಕೆಯನ್ನು ಅನರ್ಹಗೊಳಿಸಿದ, ಆ ಮೂಲಕ ಅವರ ಪ್ರಧಾನಿ ಹುದ್ದೆಯನ್ನು ಸಂಚಕಾರಕ್ಕೊಡ್ಡಿದ್ದ ಅಲಾಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಜಗಮೋಹನ್‌ ಲಾಲ್ ಸಿನ್ಹಾ ಅವರು ನೀಡಿದ್ದ 1975ರ ತೀರ್ಪು ದೇಶವನ್ನು ಅಲ್ಲಾಡಿಸಿದ ಅತ್ಯಂತ ದಿಟ್ಟತನದ ತೀರ್ಪಾಗಿತ್ತು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರು ಶನಿವಾರ ನೆನೆದರು.

“ಶ್ರೀಮತಿ ಇಂದಿರಾ ಗಾಂಧಿಯವರನ್ನು ಅನರ್ಹಗೊಳಿಸಿದ ದೇಶವನ್ನೇ ಅಲ್ಲಾಡಿಸಿದ ತೀರ್ಪನ್ನು 1975ರಲ್ಲಿ ನೀಡಿದ್ದು ಅಲಾಹಾಬಾದ್ ಹೈಕೋರ್ಟ್‌ನ ನ್ಯಾ. ಜಗಮೋಹನ್‌ ಲಾಲ್‌ ಸಿನ್ಹಾ ಅವರು. ಆ ತೀರ್ಪು ಅತ್ಯಂತ ದಿಟ್ಟತನದ್ದಾಗಿತ್ತು, ಅದುವೇ ತುರ್ತು ಪರಿಸ್ಥಿತಿಯ ಘೋಷಣೆಗೆ ನೇರವಾಗಿ ಕಾರಣವಾಯಿತು ಎಂದು ಹೇಳಬಹುದು. ಅದರ (ತುರ್ತು ಪರಿಸ್ಥಿತಿಯ) ಪರಿಣಾಮಗಳನ್ನು ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ” ಎಂದು ಅವರು ಹೇಳಿದರು.

ಸಿಜೆಐ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಉದ್ದೇಶಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಅಲಾಹಾಬಾದ್‌ನ ನ್ಯಾಯವಾದಿ ವರ್ಗ ಹಾಗೂ ನ್ಯಾಯಮೂರ್ತಿ ಸಮೂಹದ ಬಗ್ಗೆ ವಿಶೇಷ ಮೆಚ್ಚುಗೆ ಸೂಚಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಭಾರತದ ಸಂವಿಧಾನದ ಕರಡಿನ ರಚನೆಯಲ್ಲಿ ಮಹತ್ತರ ಕಾಣಿಕೆಯನ್ನು ನೀಡಿದ ಅಲಾಹಾಬಾದ್‌ನ ಶ್ರೇಷ್ಠ ಕಾನೂನು ದಿಗ್ಗಜರನ್ನು ನೆನೆದರು.

“ಅಲಾಹಾಬಾದ್‌ ಹೈಕೋರ್ಟ್‌ಗೆ 150ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸವಿದೆ. ದೇಶದ ಶ್ರೇಷ್ಠ ನ್ಯಾಯವೇತ್ತರನ್ನು ರೂಪಿಸಿದ ಶ್ರೇಯ ಅಲಾಹಾಬಾದ್‌ ನ್ಯಾಯವಾದಿ ವರ್ಗ ಮತ್ತು ನ್ಯಾಯಮೂರ್ತಿ ಸಮೂಹಕ್ಕಿದೆ. ಡಾ. ಸಚ್ಚಿದಾನಂದ ಸಿನ್ಹಾ (ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷರು), ಪಂಡಿತ್‌ ಮೋತಿಲಾಲ್‌ ನೆಹರು, ತೇಹ್‌ ಬಹಾದುರ್‌ ಸಪ್ರು ಮತ್ತು ಪುರುಷೋತ್ತಮ್‌ ದಾಸ್‌ ಟಂಡನ್‌ ಇವರೆಲ್ಲರೂ ಮಹಾನ್‌ ಅಲಾಹಾಬಾದ್‌ ನ್ಯಾಯವಾದಿ ಪರಿಷತ್ತಿನ ಸದಸ್ಯರು,” ಎಂದು ಸಿಜೆಐ ಸ್ಮರಿಸಿದರು.

ಚೌರಿಚೌರಾ ಪ್ರಕರಣದಲ್ಲಿ ಪಂಡಿತ್‌ ಮದನ್‌ ಮಾಳವೀಯ ಅವರು ವಾದಿಸಿದ್ದು ಸಹ ಇದೇ ಹೈಕೋರ್ಟ್‌ನಲ್ಲಿ ಎಂದೂ ಅವರು ನೆನೆದರು. ಇಂತಹ ಘನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಅವರು ಈ ವೇಳೆ ಅಲ್ಲಿನ ವಕೀಲ ಸಮುದಾಯಕ್ಕೆ ಕರೆ ನೀಡಿದರು.

Related Stories

No stories found.
Kannada Bar & Bench
kannada.barandbench.com