ತಾಜ್‌ ಕೊಠಡಿ ತೆರೆಯಲು ಕೋರಿದ್ದ ಮನವಿ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್: ಪಿಐಎಲ್ ವ್ಯವಸ್ಥೆಯ ಅಣಕ ಬೇಡ ಎಂದು ಗರಂ

“ದಯವಿಟ್ಟು ಎಂ ಎ ಅಧ್ಯಯನ ಮಾಡಿ. ನಂತರ ಎನ್ಇಟಿ ಜೆಆರ್‌ಎಫ್‌ ತೇರ್ಗಡೆಯಾಗಿ. ಸಂಶೋಧನೆ ಮಾಡಲು ಯಾವುದೇ ವಿವಿ ನಿರಾಕರಿಸಿದರೆ ನಮ್ಮ ಬಳಿ ಬನ್ನಿ" ಎಂದು ನ್ಯಾಯಾಲಯ ಅರ್ಜಿದಾರರಿಗೆ ಕುಟುಕಿತು.
ತಾಜ್‌ ಕೊಠಡಿ ತೆರೆಯಲು ಕೋರಿದ್ದ ಮನವಿ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್: ಪಿಐಎಲ್ ವ್ಯವಸ್ಥೆಯ ಅಣಕ ಬೇಡ ಎಂದು ಗರಂ
Published on

ವಿವಾದಿತ ಚರಿತ್ರೆಗೆ ಇತಿಹಾಸ ನೀಡಲು ತಾಜ್‌ಮಹಲ್‌ನ ಕೆಲ ಕೊಠಡಿಗಳನನು ತೆರೆಯುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದ ಮನವಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿದೆ. [ಡಾ ರಜನೀಶ್ ಸಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮಾಹಿತಿ ಸ್ವಾತಂತ್ರ್ಯದಡಿ ಸ್ಮಾರಕದ ಕೊಠಡಿಗಳನ್ನು ತೆರಯಲು ಅನುಮತಿಸಬೇಕು ಎಂಬ ಅರ್ಜಿದಾರರ ಕೋರಿಕೆಗೆ ನ್ಯಾಯಮೂರ್ತಿಗಳಾದ ಡಿ ಕೆ ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. “ನಾಳೆ ನೀವು ಬಂದು ನಮ್ಮನ್ನು ಗೌರವಾನ್ವಿತ ನ್ಯಾಯಮೂರ್ತಿಗಳ ಕೊಠಡಿಗೆ ಹೋಗುವಂತೆ ಹೇಳುತ್ತೀರಾ? ದಯವಿಟ್ಟು, ಪಿಐಎಲ್ ವ್ಯವಸ್ಥೆಯನ್ನು ಅಪಹಾಸ್ಯ ಮಾಡಬೇಡಿ” ಎಂದು ಅದು ಎಚ್ಚರಿಸಿತು.

Also Read
ತಾಜ್ ಮಹಲ್ ಸ್ಮಾರಕ ತೇಜೋ ಮಹಾಲಯವೇ ಎಂದು ತಿಳಿಯಲು ಸತ್ಯಶೋಧನಾ ಸಮಿತಿ ರಚಿಸಲು ಕೋರಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಮನವಿ

ಬಿಜೆಪಿ ಅಯೋಧ್ಯಾ ಘಟಕದ ಮಾಧ್ಯಮ ಮುಖ್ಯಸ್ಥ ಎಂದು ಹೇಳಿಕೊಂಡಿರುವ ಅರ್ಜಿದಾರ ಡಾ. ರಜನೀಶ್‌ ಸಿಂಗ್‌ “ಮುಚ್ಚಿದ ಕೋಣೆಗಳ ಬಗ್ಗೆಯಷ್ಟೇ ನಮ್ಮ ಕಾಳಜಿ. ಆ ಬಾಗಿಲುಗಳ ಹಿಂದೆ ಏನಿದೆ ಎಂದು ಎಲ್ಲರಿಗೂ ತಿಳಿಯಬೇಕು” ಎಂದರು. “ಸ್ಥಳ ಭಗವಾನ್‌ ಶಿವ ಅಥವಾ ಅಲ್ಲಾಹು ಅಕ್ಬರ್‌ಗೆ ಸೇರಿದೆ ಎಂಬ ಅಂಶದ ಬಗ್ಗೆ ನಾನು ಚರ್ಚಿಸುತ್ತಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಇತ್ತ ಅರ್ಜಿ ಅಲಾಹಾಬಾದ್‌ ಹೈಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರ ವಿರೋಧ ವ್ಯಕ್ತಪಡಿಸಿತು. ಆಗ ನ್ಯಾಯಾಲಯ ಕೂಡ “ಇದೆಲ್ಲಾ ನ್ಯಾಯಾಲಯದಲ್ಲಿ ಚರ್ಚಿಸುವಂತಹ ವಿಷಯವೇ? ನಾವು ಅಂತಹ ಸಂಗತಿಗಳ ಬಗಗೆ ತರಬೇತಿ ಪಡೆದು ಸಿದ್ಧರಾಗಿದ್ದೇವೆ ಎಂದು ಭಾವಿಸುವಿರೇ?” ಎಂದು ಪ್ರಶ್ನಿಸಿತು.

Also Read
ಗ್ಯಾನ್‌ವಪಿ- ಕಾಶಿ ವಿಶ್ವನಾಥ ವಿವಾದ: ಮಸೀದಿಯೊಳಗೆ ವಿಡಿಯೋ ಚಿತ್ರೀಕರಣ ಮುಂದುವರೆಸಲು ವಾರಣಾಸಿ ನ್ಯಾಯಾಲಯ ಅನುಮತಿ

"ಮಾಹಿತಿ ಹಕ್ಕು" ಕುರಿತು ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ತಾವು ಕೋರಿರುವ ಅಧ್ಯಯನಕ್ಕೂ ಮಾಹಿತಿ ಹಕ್ಕಿಗೂ ಯಾವುದೇ ರೀತಿಯ ನಂಟು ಇದೆಯೇ?” ಎಂದು ಕೇಳಿತು.

ಅಲ್ಲದೆ “ದಯವಿಟ್ಟು ಎಂ ಎ ಅಧ್ಯಯನ ಮಾಡಿ. ನಂತರ ಎನ್‌ಇಟಿ ಜೆಆರ್‌ಎಫ್‌ ತೇರ್ಗಡೆಯಾಗಿ. ಸಂಶೋಧನೆ ಮಾಡಲು ಯಾವುದೇ ವಿಶ್ವವಿದ್ಯಾಲಯ ನಿರಾಕರಿಸಿದರೆ ನಮ್ಮ ಬಳಿ ಬನ್ನಿ” ಎಂದು ಪೀಠ ಅರ್ಜಿದಾರರಿಗೆ ಕುಟುಕಿತು.

Kannada Bar & Bench
kannada.barandbench.com