ಸಿಎಎ ವಿರೋಧಿ ಭಾಷಣ: ಡಾ. ಕಫೀಲ್ ಖಾನ್‌ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ರದ್ದುಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌

ಸರ್ಕಾರದಿಂದ ಅಗತ್ಯವಾದ ಅನುಮತಿ ಪಡೆದಿಲ್ಲ ಎಂಬ ಆಧಾರದಲ್ಲಿ ಕಾನೂನು ಪ್ರಕ್ರಿಯೆ ಮತ್ತು ಅಲಿಗಢದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಅವರ ಪರಿಗಣನೆ ಆದೇಶವನ್ನು ವಜಾ ಮಾಡಿದ ನ್ಯಾ. ಗೌತಮ್‌ ಚೌಧರಿ ನೇತೃತ್ವದ ಏಕಸದಸ್ಯ ಪೀಠ.
Dr. Kafeel Khan and AMU
Dr. Kafeel Khan and AMU

ಎರಡು ವರ್ಷಗಳ ಹಿಂದೆ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಹೋರಾಟ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧಿ ಭಾಷಣ ಮಾಡಿದ್ದಕ್ಕೆ ಡಾ. ಕಫೀಲ್‌ ಖಾನ್‌ ವಿರುದ್ಧ ಆರಂಭಿಸಲಾಗಿದ್ದ ಕ್ರಿಮಿನಲ್‌ ಪ್ರಕ್ರಿಯೆಯನ್ನು ಅಲಾಹಾಬಾದ್‌ ಹೈಕೋರ್ಟ್‌ ರದ್ದುಗೊಳಿಸಿದೆ.

ಸಂಬಂಧಪಟ್ಟ ಇಲಾಖೆಯು ಸರ್ಕಾರದಿಂದ ಅಗತ್ಯವಾದ ಅನುಮತಿ ಪಡೆದಿಲ್ಲ ಎಂಬ ಆಧಾರದಲ್ಲಿ ಕಾನೂನು ಪ್ರಕ್ರಿಯೆ ಮತ್ತು ಅಲಿಗಢದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಅವರ ಪರಿಗಣನೆ ಆದೇಶವನ್ನು ನ್ಯಾಯಮೂರ್ತಿ ಗೌತಮ್‌ ಚೌಧರಿ ನೇತೃತ್ವದ ಏಕಸದಸ್ಯ ಪೀಠವು ರದ್ದು ಮಾಡಿದೆ.

“ಭಾರತೀಯ ದಂಡ ಸಂಹಿತೆಯಡಿ ಅಪರಾಧವನ್ನು ಪರಿಗಣಿಸುವುದಕ್ಕೂ ಮುನ್ನ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಜಿಲ್ಲಾ ದಂಡಾಧಿಕಾರಿ ಅವರಿಂದ ಪ್ರಾಸಿಕ್ಯೂಷನ್‌ ಅನುಮತಿ ಪಡೆಯಲಾಗಿಲ್ಲ. ಮ್ಯಾಜಿಸ್ಟ್ರೇಟ್‌ ಅವರು ಪರಿಗಣನೆ ಆದೇಶ ಹೊರಡಿಸುವಾಗ ಸಂಬಂಧಿತ ನಿಬಂಧನೆಗಳನ್ನು ಸರಿಯಾಗಿ ಅನುಸರಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 482ರ ಅಡಿ ಡಾ. ಖಾನ್‌ ಸಲ್ಲಿಸಿರುವ ಮನವಿಯನ್ನು ಒಪ್ಪಿಕೊಳ್ಳಲಾಗಿದ್ದು, ಅವರ ವಿರುದ್ಧದ ಪ್ರಕರಣಗಳನ್ನು ವಜಾ ಮಾಡಲಾಗಿದೆ. 2019ರ ಡಿಸೆಂಬರ್‌ 12ರಂದು ಎಎಂಯುನಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಖಾನ್‌ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

ಖಾನ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ (ಧರ್ಮಗಳ ನಡುವೆ ದ್ವೇಷ ಹರಡುವುದು), 153ಬಿ (ರಾಷ್ಟ್ರೀಯ ಏಕತೆಗೆ ಪೂರ್ವಗ್ರಹ ಪೀಡಿತವಾಗಿ ವರ್ತಿಸುವುದು), 505ರ (ಸಾರ್ವಜನಿಕ ಕಿಡಿಗೇಡಿತನ ಪ್ರಚೋದಿಸುವ ಹೇಳಿಕೆಗಳು) ಅಡಿ ದೂರು ದಾಖಲಿಸಲಾಗಿತ್ತು.

Also Read
ಡಾ. ಕಫೀಲ್ ಖಾನ್ ಬಂಧನದ ಎನ್‌ಎಸ್‌ಎ ಆದೇಶ ಬದಿಗೆ ಸರಿಸಿ ಬಿಡುಗಡೆಗೆ ಆದೇಶಿಸಿದ ಅಲಹಾಬಾದ್ ಹೈಕೋರ್ಟ್

ಸಿಆರ್‌ಪಿಸಿ ಸೆಕ್ಷನ್‌ 196 (ಎ) ಅನ್ವಯ ಕೇಂದ್ರ ಅಥವಾ ರಾಜ್ಯ ಅಥವಾ ಜಿಲ್ಲಾ ದಂಡಾಧಿಕಾರಿ ಅವರಿಂದ ಪೂರ್ವಾನುಮತಿ ಪಡೆದ ಬಳಿಕ ಖಾನ್‌ ವಿರುದ್ಧದ ಆರೋಪಗಳನ್ನು ಪರಿಗಣಿಸಬೇಕು ಎಂದು ಹೇಳಿ ನ್ಯಾಯಾಲಯವು ಡಾ. ಕಫೀಲ್‌ ಖಾನ್‌ ಪ್ರಕರಣವನ್ನು ಮರಳಿ ಅಡಲಿಗಢ ನ್ಯಾಯಾಲಯಕ್ಕೆ ಕಳುಹಿಸಿದೆ.

ಸಿಎಎ ವಿರೋಧಿ ಭಾಷಣದ ಹಿನ್ನೆಲೆಯಲ್ಲಿ ಖಾನ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಬಂಧಿಸಲಾಗಿತ್ತು. ಇದನ್ನು ಕಳೆದ ವರ್ಷದ ಸೆಪ್ಟೆಂಬರ್‌ 1ರಂದು ಅಲಾಹಾಬಾದ್‌ ಹೈಕೋರ್ಟ್‌ ವಜಾ ಮಾಡಿತ್ತು. ಈ ಆದೇಶವನ್ನು ಡಿಸೆಂಬರ್‌ 17ರಂದು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಎನ್‌ಎಸ್‌ಎ ಕಾಯಿದೆ ಅಡಿ ಬಂಧನವನ್ನು ಪ್ರಶ್ನಿಸಿ ಖಾನ್‌ ತಾಯಿ ನುಜಾತ್‌ ಪರ್ವೀನ್‌ ಅವರು ಹೇಬಿಯಸ್‌ ಕಾರ್ಪಸ್‌ ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com