ಗೋರಖ್‌ಪುರದ ಫ್ಯೂಚರ್ ರಿಟೇಲ್ ಮಾಲೀಕತ್ವದ ಬಿಗ್ ಬಜಾರ್ ಮಳಿಗೆಗೆ ಆಹಾರ ಉತ್ಪನ್ನಗಳನ್ನು ಪೂರೈಸಲು ಹಣ ಪಾವತಿಸಿಲ್ಲ ಎಂದು ಆರೋಪಿಸಿ ಫ್ಯೂಚರ್ ಗ್ರೂಪ್ ಸಂಸ್ಥಾಪಕ ಮತ್ತು ಸಿಇಒ ಕಿಶೋರ್ ಬಿಯಾನಿ ವಿರುದ್ಧದ ಕ್ರಿಮಿನಲ್ ದೂರಿನ ವಿಚಾರಣೆಯನ್ನು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.
ತಾನು 2020ರಲ್ಲಿ ಸರಬರಾಜು ಮಾಡಿದ್ದ ಉತ್ಪನ್ನಗಳಿಗೆ ರೂ 12 ಲಕ್ಷಕ್ಕಿಂತ ಹೆಚ್ಚಿನ ಮತ್ತ ನೀಡಬೇಕಿದೆ ಎಂದು ಸಗಟು ವ್ಯಾಪಾರಿಯೊಬ್ಬರು ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಗೋರಖ್‌ಪುರ ನ್ಯಾಯಾಲಯದ ನ್ಯಾಯಾಧೀಶ ಮಯಾಂಕ್ ಕುಮಾರ್ ಜೈನ್ ಅವರು ಬಿಯಾನಿ ವಿರುದ್ಧ ಹೊರಡಿಸಿದ್ದ ಸಮನ್ಸ್ ಮತ್ತು ಜಾಮೀನು ರಹಿತ ವಾರಂಟನ್ನು ಬದಿಗೆ ಸರಿಸಿದರು.
ಇದು ದೂರುದಾರ ಮತ್ತು ಗೋರಖ್‌ಪುರದ ಕಂಪನಿಯ ಮಳಿಗೆಯ ನಡುವಿನ ನಿಯಮಿತ ವಾಣಿಜ್ಯ ವ್ಯವಹಾರವಾಗಿದ್ದು, ಇದಕ್ಕೆ ಕಾರ್ಯನಿರ್ವಾಹಕ ಅಧ್ಯಕ್ಷರನ್ನು (ಬಿಯಾನಿ) ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಕಂಪನಿಗೆ ಮಧ್ಯಂತರ ಪರಿಹಾರ ವೃತ್ತಿಪರರನ್ನು ನೇಮಿಸಲು ಆದೇಶ ಹೊರಡಿಸಿದ್ದಾಗಲೇ 2022ರ ಅಕ್ಟೋಬರ್‌ನಲ್ಲಿ ದೂರು ದಾಖಲಿಸಲಾಗಿದೆ ಎಂದು ಅದು ತಿಳಿಸಿದೆ.
ಆದ್ದರಿಂದ, ಬಿಯಾನಿ ಅವರು ಕಂಪನಿಯ ಮೇಲೆ ಆಡಳಿತಾತ್ಮಕ ಅಥವಾ ಮೇಲ್ವಿಚಾರಣಾ ನಿಯಂತ್ರಣ ಹೊಂದಿಲ್ಲ ಎಂದು ನ್ಯಾಯಾಲಯ ಕಂಡುಕೊಂಡಿದೆ.
ಬಿಯಾನಿ ಅವರಿಗೆ ಯಾವುದೇ ರೀತಿಯ ಆಸ್ತಿ ವಹಿಸಲಾಗಿಲ್ಲ ಮತ್ತು ಅವರು ಆಸ್ತಿಯನ್ನು ಅಪ್ರಾಮಾಣಿಕವಾಗಿ ದುರುಪಯೋಗಪಡಿಸಿಕೊಂಡಿಲ್ಲ. ಇಲ್ಲವೇ ತನ್ನ ಸ್ವಂತ ಬಳಕೆಗೆ ಪರಿವರ್ತಿಸಿಲ್ಲ ಎಂದು ನ್ಯಾಯಾಲಯ ಹೇಳಿತು.
ಈ ಹಿನ್ನೆಲೆಯಲ್ಲಿ ಬಿಯಾನಿ ಅವರ ಮನವಿ ಪುರಸ್ಕರಿಸಿದ ಹೈಕೋರ್ಟ್, ಗೋರಖ್‌ಪುರ ನ್ಯಾಯಾಲಯದಲ್ಲಿ ಅವರ ವಿರುದ್ಧ ನಡೆಯುತ್ತಿದ್ದ ವಿಚಾರಣೆಯನ್ನು ಸಂಪೂರ್ಣ ರದ್ದುಗೊಳಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]