ಅತ್ಯಾಚಾರ ಪ್ರಕರಣದಲ್ಲಿ ರಾಜಿಸಂಧಾನದ ಮೂಲಕ ಮದುವೆ; ಎಫ್‌ಐಆರ್‌ ರದ್ದುಪಡಿಸಿದ ಅಲಾಹಾಬಾದ್‌ ಹೈಕೋರ್ಟ್‌

ಸಂಜ್ಞೇಯ ಮತ್ತು ರಾಜಿ ಮಾಡಿಕೊಳ್ಳಲಾಗದ ಅಪರಾಧಗಳಲ್ಲಿ ಕೂಡ ಸಂಧಾನ ಮಾಡಿಕೊಳ್ಳಬಹುದು ಎಂದು ಗಿಯಾನ್ ಸಿಂಗ್ ವರ್ಸಸ್ ಪಂಜಾಬ್ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಹೇಳಿದ್ದನ್ನು ಆಧರಿಸಿ ಹೈಕೋರ್ಟ್‌ ಈ ಆದೇಶ ನೀಡಿದೆ.
Allahabad Highcourt
Allahabad Highcourt
Published on

ಅತ್ಯಾಚಾರ ಆರೋಪಿಯ ವಿರುದ್ಧದ ಎಫ್‌ಐಆರ್‌ ಅನ್ನು ಪ್ರಕರಣವೊಂದರಲ್ಲಿ ಅಲಾಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಆರೋಪಿ ಹಾಗೂ ಸಂತ್ರಸ್ತೆಯು ರಾಜಿ ಸಂಧಾನದ ಮೂಲಕ ಮದುವೆಯಾಗಿರುವುದು ಹಾಗೂ ಮಹಿಳೆಯ ತಂದೆ ಆರೋಪಿಯ ವಿರುದ್ಧ ಸುಳ್ಳು ಮತ್ತು ಕ್ಷುಲ್ಲಕ ಆರೋಪಗಳನ್ನು ದೂರಿನಲ್ಲಿ ನೀಡಿರುವುದನ್ನು ಪರಿಗಣಿಸಿ ನ್ಯಾಯಾಲಯ ಎಫ್‌ಐಆರ್‌ ರದ್ದುಪಡಿಸಿದೆ.

ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾ. ಮಂಜುರಾಣಿ ಚೌಹಾಣ್ ಅವರು ಆದೇಶದಲ್ಲಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು:

"ಪ್ರಕರಣದ ನೈಜತೆ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ... ಮತ್ತು ಕಕ್ಷಿದಾರರ ಪರ ವಕೀಲರು ಸಲ್ಲಿಸಿದ ಅಹವಾಲುಗಳನ್ನು ಕೂಡ ಪರಿಗಣಿಸಿ, ಎರಡೂ ಕಡೆಯವರು ವಿವಾದವನ್ನು ಬಗೆಹರಿಸಿಕೊಂಡಿರುವುದರಿಂದ ಮೇಲೆ ತಿಳಿಸಿದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ದೀರ್ಘಗೊಳಿಸುವುದರಿಂದ ಯಾವುದೇ ಉಪಯುಕ್ತ ಉದ್ದೇಶ ಪೂರೈಸಿದಂತಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ."
ಅಲಾಹಾಬಾದ್ ಹೈಕೋರ್ಟ್

ಆರೋಪಿ ಮತ್ತು ದೂರುದಾರರ ನಡುವೆ ರಾಜಿ ಏರ್ಪಟ್ಟ ಆಧಾರದಲ್ಲಿ ಹಾಥ್‌ರಸ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಮತ್ತು ಆ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್‌ 363, 366, 376ರ ಅಡಿಯಲ್ಲಿ ದಾಖಲಿಸಲಾಗಿದ್ದ ಮೊಕದ್ದಮೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.

Also Read
ಹಾಥ್‌ರಸ್ ಪ್ರಕರಣದ ತನಿಖೆಯಲ್ಲಿ ನೇರವಾಗಿ ಪಾಲ್ಗೊಳ್ಳದವರು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ - ಅಲಾಹಾಬಾದ್ ಹೈಕೋರ್ಟ್

ಅರ್ಜಿದಾರರು ವಿವಾಹವಾಗಿದ್ದು ಗಂಡ ಮತ್ತು ಹೆಂಡತಿಯಾಗಿ ಸಂತೋಷದಿಂದ ಬದುಕುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಹಿಳೆಯ ತಂದೆ ದಾಖಲಿಸಿದ ಎಫ್‌ಐಆರ್ ಸುಳ್ಳು ಮತ್ತು ಕ್ಷುಲ್ಲಕವಾದುದು ಎಂದು ಆರೋಪಿಸಲಾಗಿದೆ.

ರಾಜಿ ನಂತರ, ಸಂಬಂಧಪಟ್ಟ ಅಧೀನ ನ್ಯಾಯಾಲಯದಲ್ಲಿ ಎಫ್‌ಐಆರ್ ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ ರಾಜಿಯಲ್ಲದ ಅಪರಾಧಗಳಿಗೆ ಸಂಬಂಧಿಸಿದ ಆದೇಶ ರವಾನಿಸಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿತ್ತು.

ಈ ಸಂಬಂಧ ಅರ್ಜಿದಾರರು ಹೈಕೋರ್ಟ್ ಮೆಟಿಲೇರಿದ್ದರು. ಸಂಜ್ಞೇಯ ಮತ್ತು ರಾಜಿ ಮಾಡಿಕೊಳ್ಳಲಾಗದ ಅಪರಾಧಗಳಲ್ಲಿ ಕೂಡ ಸಂಧಾನ ಮಾಡಿಕೊಳ್ಳಬಹುದು ಎಂದು ಗಿಯಾನ್ ಸಿಂಗ್ ವರ್ಸಸ್ ಪಂಜಾಬ್ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಹೇಳಿದ್ದನ್ನು ಆಧರಿಸಿ ಹೈಕೋರ್ಟ್‌ ಈ ಆದೇಶ ನೀಡಿದೆ.

ಇದನ್ನು ಆಧರಿಸಿ ಕ್ರಿಮಿನಲ್‌ ಮೊಕದ್ದಮೆ ಅಮಾನ್ಯಗೊಳಿಸಲು ಸೂಕ್ತ ಪ್ರಕರಣ ಇದು ಎಂದು ಅಭಿಪ್ರಾಯಪಟ್ಟ ಅಲಹಾಬಾದ್ ಹೈಕೋರ್ಟ್ ಎಫ್‌ಐಆರ್‌ ರದ್ದುಗೊಳಿಸಿತು.

Kannada Bar & Bench
kannada.barandbench.com