ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಹದಿನೇಳು ಜಾತಿಗಳನ್ನು ಪರಿಶಿಷ್ಟ ಜಾತಿ ಎಂದು ಗುರುತಿಸುವ ಉತ್ತರ ಪ್ರದೇಶ ಸರ್ಕಾರದ ಎರಡು ಆದೇಶಗಳನ್ನು ಅಲಾಹಾಬಾದ್ ಹೈಕೋರ್ಟ್ ರದ್ದುಗೊಳಿಸಿತು. [ಡಾ. ಬಿ ಆರ್ ಅಂಬೇಡ್ಕರ್ ಗ್ರಂಥಾಲಯ ಏವಂ ಜನ ಕಲ್ಯಾಣ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ ಮಾತ್ರ ಎಸ್ಸಿ ಜಾತಿಗಳನ್ನು ಸೂಚಿಸಬಹುದಾಗಿದ್ದು ಅಂತಹ ಆದೇಶದಲ್ಲಿ ಯಾವುದೇ ಬದಲಾವಣೆಯನ್ನು ಸಂಸತ್ತು ಮಾತ್ರ ಮಾಡಬಹುದು ಎಂಬ ಆಧಾರದ ಮೇಲೆ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಜೆ ಜೆ ಮುನೀರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅಧಿಸೂಚನೆಗಳನ್ನು ರದ್ದುಗೊಳಿಸಿತು. 341 (2) ವಿಧಿಯ ಪ್ರಕಾರ, ರಾಷ್ಟ್ರಪತಿಗಳ ಆದೇಶ ನಿರ್ದಿಷ್ಟಪಡಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಗೆ ಯಾವುದೇ ಬದಲಾವಣೆಯನ್ನು ಕಾನೂನಿನ ಮೂಲಕ ಸಂಸತ್ತು ಮಾತ್ರ ಮಾಡಬಹುದು” ಎಂದು ನ್ಯಾಯಾಲಯ ಹೇಳಿದೆ.
ಸ್ವತಃ ರಾಷ್ಟ್ರಪತಿಗಳೂ ಕೂಡ ನಂತರ ಅಧಿಸೂಚನೆಯ ಮೂಲಕ ಯಾವುದೇ ರೀತಿಯ ವ್ಯತ್ಯಾಸ ಮಾಡದಂತೆ ರಾಷ್ಟ್ರಪತಿಯವರ ಆದೇಶವನ್ನು ಪ್ರತ್ಯೇಕಿಸಲಾಗಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.
"ಅದು ಸಂಸದೀಯ ಅಧಿನಿಯಮದಿಂದ ಮಾಡಬಹುದಾದ ಏಕೈಕ ಮಾರ್ಪಾಡಾಗಿದ್ದು, ಬೇರೆ ರೀತಿಯಾಗಿ ಅಲ್ಲ" ಎಂದು ಪೀಠ ಸ್ಪಷ್ಟಪಡಿಸಿದೆ. ಅಲ್ಲದೆ, ಸಂವಿಧಾನದ 341ನೇ ವಿಧಿ (ಪರಿಶಿಷ್ಟ ಜಾತಿಗಳು) ಅಡಿಯಲ್ಲಿ ಒದಗಿಸಲಾದ ಆದೇಶವನ್ನು ಗಣನೆಗೆ ತೆಗೆದುಕೊಳ್ಳುವಾಗ, ಸಂಸತ್ತು ಮಾಡಿದ ಕಾನೂನು ಹೊರತುಪಡಿಸಿ ಯಾವುದೇ ಜಾತಿ ಅಥವಾ ಗುಂಪನ್ನು ಎಸ್‌ಸಿ ಪಟ್ಟಿಗೆ ಸೇರಿಸಲು ಯಾವುದೇ ಅಧಿಕಾರ ವ್ಯಾಪ್ತಿ ಇರುವುದಿಲ್ಲ ಎಂದು ಪೀಠ ಹೇಳಿದೆ.
ಕೆಲವು ಒಬಿಸಿ ಸದಸ್ಯರನ್ನು ಎಸ್‌ಸಿ ಎಂದು ಘೋಷಿಸಿ ಉತ್ತರಪ್ರದೇಶ ಸರ್ಕಾರ 2016 ಮತ್ತು 2019ರಲ್ಲಿ ಹೊರಡಿಸಲಾದ ಎರಡು ಆದೇಶಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಸಂವಿಧಾನದ 341ನೇ ವಿಧಿ ಅಡಿಯಲ್ಲಿ ಮಾಡಿದಂತೆ ಅವರನ್ನು ಎಸ್‌ಸಿ ಎಂದು ನಿರ್ದಿಷ್ಟಪಡಿಸಲು ಉದ್ದೇಶಿಸಿಲ್ಲ ಎಂಬ ಸ್ಪಷ್ಟೀಕರಣದ ಸೋಗಿನಲ್ಲಿ ಈ ಆದೇಶಗಳನ್ನು ಹೊರಡಿಸಲಾಗಿದೆ ಎಂಬುದಾಗಿ ಅರ್ಜಿ ಹೇಳಿತ್ತು.
ರಾಷ್ಟ್ರಪತಿಗಳ ಆದೇಶವನ್ನು ಸೇರಿಸುವ, ಹೊರಗಿಡುವ, ತಿದ್ದುಪಡಿ ಮಾಡುವ ಅಥವಾ ಬದಲಿಸುವ ಅಧಿಕಾರವನ್ನು ಸ್ಪಷ್ಟವಾಗಿ ಮತ್ತು ವಿಶೇಷವಾಗಿ ಸಂಸತ್ತಿಗೆ ಮಾತ್ರ ನೀಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಮತ್ತು ಮಿಲಿಂದ್ ನಡುವಣ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ನ್ಯಾಯಾಲಯ ವಿಚಾರಣೆ ವೇಳೆ ಚರ್ಚಿಸಿತು.
ರಾಷ್ಟ್ರಪತಿ ಆದೇಶದಲ್ಲಿ ಉಲ್ಲೇಖಿಸಿದ ಯಾವುದೇ ಅಂಶಗಳಲ್ಲಿ ನಿರ್ದಿಷ್ಟ ಜಾತಿ ಉಪಜಾತಿ ಅಥವಾ ಗುಂಪು ಇಲ್ಲವೇ ಬುಡಕಟ್ಟಿನ ಭಾಗವನ್ನು ಸೇರಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಕುರಿತಂತೆ ನ್ಯಾಯಾಲಯಗಳು ನ್ಯಾಯವ್ಯಾಪ್ತಿ ವಿಸ್ತರಿಸಲು ಸಾಧ್ಯವಿಲ್ಲ ಮತ್ತು ವಿಸ್ತರಿಸಬಾರದು ಎಂದು ತೀರ್ಪು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಎರಡೂ ಆದೇಶಗಳನ್ನು ರದ್ದುಗೊಳಿಸಿತು.