ಉತ್ತರ ಪ್ರದೇಶದ ಅಕ್ರಮ ಮತಾಂತರ ನಿಷೇಧ ಕಾಯಿದೆಯ ನಿಯಮಾವಳಿಗಳನ್ನು ಪಾಲಿಸದ ಕಾರಣ ಜೀವ ರಕ್ಷಣೆ ಕೋರಿ ಎಂಟು ಹಿಂದೂ- ಮುಸ್ಲಿಂ ದಂಪತಿ ಸಲ್ಲಿಸಿದ್ದ ಅರ್ಜಿಗಳನ್ನು ಅಲಾಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಜನವರಿ 10ರಿಂದ 16ರ ನಡುವೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದ ಈ ದಂಪತಿಗಳು ಕುಟುಂಬಸ್ಥರಿಂದ ತಮಗೆ ರಕ್ಷಣೆ ನೀಡಬೇಕು ಮತ್ತು ತಮ್ಮ ವೈವಾಹಿಕ ಜೀವನದಲ್ಲಿ ಅವರು ಹಸ್ತಕ್ಷೇಪ ಮಾಡದಂತೆ ನಿರ್ದೇಶನ ನೀಡುವಂತೆ ಕೋರಿದ್ದ ಮನವಿಗಳನ್ನು ವಜಾಗೊಳಿಸಲಾಗಿದೆ.
ಇವು ಅಂತರ್ಧರ್ಮೀಯ ವಿವಾಹ ಪ್ರಕರಣಗಳಾಗಿದ್ದರೂ ಮತಾಂತರ ವಿರೋಧಿ ಕಾಯಿದೆ ಪಾಲಿಸದ ಕಾರಣ ಕಾಯಿದೆಗೆ ಅನುಗುಣವಾಗಿಲ್ಲ ಎಂದು ನ್ಯಾ. ಸರಳ್ ಶ್ರೀವಾಸ್ತವ ಅವರು ತಿಳಿಸಿದರು.
ಅರ್ಜಿದಾರರು ಕೋರಿದ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ರಿಟ್ ಅರ್ಜಿ ವಜಾಗೊಳಿಸಲಾಗುತ್ತಿದೆ. ಆದರೂ ಕಾಯಿದೆಯನ್ನು ಸೂಕ್ತ ರೀತಿಯಲ್ಲಿ ಪಾಲಿಸಿದ ಬಳಿಕ ಹೊಸದಾಗಿ ರಿಟ್ ಅರ್ಜಿ ಸಲ್ಲಿಸಲು ಅರ್ಜಿದಾರರು ಮುಕ್ತರು ಎಂದು ನ್ಯಾಯಾಲಯ ಹೇಳಿದೆ.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ 2021ರಲ್ಲಿ ಜಾರಿಗೆ ಬಂದಿದ್ದು ಸುಳ್ಳು, ಬಲವಂತ, ವಂಚನೆ, ಅನಗತ್ಯ ಪ್ರಭಾವ, ಬಲಾತ್ಕಾರ ಹಾಗೂ ಆಮಿಷದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಕಾನೂನುಬಾಹಿರ ಮತಾಂತರವನ್ನು ಇದು ನಿಷೇಧಿಸುತ್ತದೆ.
ಹೈಕೋರ್ಟ್‌ನಲ್ಲಿ ದಾಖಲಾದ ಎಂಟು ಪ್ರಕರಣಗಳಲ್ಲಿ ಐವರು ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮದುವೆಯಾಗಿದ್ದರೆ, ಮೂವರು ಹಿಂದೂ ಪುರುಷರು ಮುಸ್ಲಿಂ ಮಹಿಳೆಯರನ್ನು ವಿವಾಹವಾಗಿದ್ದರು. ನ್ಯಾಯಾಲಯ ಆದೇಶಗಳಲ್ಲಿ ಅರ್ಜಿದಾರರ ಧರ್ಮಗಳನ್ನು ಉಲ್ಲೇಖಿಸಿದೆ.