ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಪ್ರಶ್ನಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಅಲಾಹಾಬಾದ್‌ ಹೈಕೋರ್ಟ್‌

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಅನುಮತಿ ನೀಡಿದ್ದ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು.
ಅಲಾಹಾಬಾದ್ ಹೈಕೋರ್ಟ್, ಜ್ಞಾನವಾಪಿ ಮಸೀದಿ
ಅಲಾಹಾಬಾದ್ ಹೈಕೋರ್ಟ್, ಜ್ಞಾನವಾಪಿ ಮಸೀದಿ

ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ದಾವೆದಾರರು ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಾಣಸಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಅಲಾಹಾಬಾದ್ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.

ವಾದ ಆಲಿಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌ ಅವರು ತೀರ್ಪನ್ನು ಕಾಯ್ದಿರಿಸಿದರು.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಅನುಮತಿ ನೀಡಿದ್ದ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು.

ಜ್ಞಾನವಾಪಿ ಮಸೀದಿ ಇರುವ ಭೂಮಿಯ ಧಾರ್ಮಿಕ ಸ್ವರೂಪ ಕುರಿತಂತೆ ನ್ಯಾಯಾಲಯದಲ್ಲಿ ಬಿರುಸಿನ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ಜಿಲ್ಲಾ ನ್ಯಾಯಾಲಯ  ಈ ಆದೇಶ ಹೊರಡಿಸಿತ್ತು.

ಸೋಮನಾಥ್ ವ್ಯಾಸ್ ಮತ್ತು ಅವರ ಕುಟುಂಬವು ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆ ಸಲ್ಲಿಸುತ್ತಿತ್ತು. ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರ 1993ರಲ್ಲಿ ಪೂಜೆಗೆ ಅಂತ್ಯಹಾಡಿತು ಎಂದು ಹಿಂದೂ ಪಕ್ಷಕಾರರು ಆರೋಪಿಸಿದ್ದರು.

ಈ ವಾದ ವಿರೋಧಿಸಿದ್ದ ಮುಸ್ಲಿಂ ದಾವೆದಾರರು ತಾವು ಮೊದಲಿನಿಂದಲೂ ಮಸೀದಿಯ ಕಟ್ಟಡದ ಮೇಲೆ ಹಿಡಿತ ಹೊಂದಿದ್ದಾಗಿ ಸಮರ್ಥಿಸಿಕೊಂಡಿದ್ದರು.

ಇಂದು ನಡೆದ ವಿಚಾರಣೆಯ ವೇಳೆ, ಜ್ಞಾನವಾಪಿ ಮಸೀದಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಎಸ್ಎಫ್ಎ ನಖ್ವಿ ಅವರು ಜಿಲ್ಲಾಧಿಕಾರಿಯವರನ್ನು ರಿಸೀವರ್ ಆಗಿ ನೇಮಕ ಮಾಡುವಾಗ ಜಿಲ್ಲಾ ನ್ಯಾಯಾಧೀಶರು ನಿರ್ಣಾಯಕ ತಪ್ಪು ಮಾಡಿದ್ದಾರೆ. ಜಿಲ್ಲಾಧಿಕಾರಿಯವರನ್ನು ರಿಸೀವರ್ ಆಗಿ ನೇಮಿಸುವಲ್ಲಿ ಹಿತಾಸಕ್ತಿಗಳ ಸಂಘರ್ಷ ನಡೆದಿತ್ತು ಎಂದು ವಾದಿಸಿದರು.

ಹಿಂದೂ ಪರವಾಗಿ ಹಾಜರಾದ ವಕೀಲ ವಿಷ್ಣು ಜೈನ್, ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಯು ತೆಹ್‌ಖಾನಾ / ದಕ್ಷಿಣ ನೆಲಮಾಳಿಗೆ ಯಾವಾಗಲೂ ಹಿಂದೂಗಳ ವಶದಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದರು.

Related Stories

No stories found.
Kannada Bar & Bench
kannada.barandbench.com