ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ- 2021ಕ್ಕೂ ಮೊದಲು ಬಾಡಿಗೆ ತಾಯ್ತನದಿಂದ ಜನಿಸಿದ ಮಗುವಿನ ಪಾಲನೆಯ ಕುರಿತು ತನ್ನ ನಿಲುವು ತಿಳಿಸುವಂತೆ ಅಲಾಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೇಳಿದೆ.
ತಮ್ಮ ಮಗುವಿಗೆ ವೀಸಾ ಪಡೆಯಲು ಬಾಡಿಗೆ ತಾಯ್ತನ ಕಾಯಿದೆಯ ಸೆಕ್ಷನ್ 4(iii)(ಎ)(II) ಅಡ್ಡಿ ಬಂದಿದೆ ಎಂದು ಕಾಯಿದೆ ಜಾರಿಗೆ ಬರುವ ಮುನ್ನ ಬಾಡಿಗೆ ತಾಯ್ತನದಿಂದ ಜನಿಸಿದ್ದ ಮಗುವೊಂದರ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಟ್ಟಾವು ರೆಹಮಾನ್ ಮಸೂದಿ ಮತ್ತು ವಿಕ್ರಮ್ ಡಿ ಚೌಹಾಣ್ ಅವರಿದ್ದ ಪೀಠ ಕೇಂದ್ರದ ನಿಲುವು ತಿಳಿಸಲು ಹೇಳಿತು.
ಮಗುವಿಗೆ ಆಸ್ಟ್ರೇಲಿಯಾದ ವೀಸಾ ಪಡೆಯಲು ಪೋಷಕರು ಯತ್ನಿಸಿದಾಗ ಹೈ ಕಮಿಷನರ್ ಕಚೇರಿ ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಮಗು ಎಲ್ಲಿ ವಾಸಿಸಬೇಕು ಎಂಬ ಕುರಿತು ತಮ್ಮ ಸಂಪೂರ್ಣ ಒಪ್ಪಿಗೆ ಇದೆ ಎಂಬ ನ್ಯಾಯಾಲಯದ ಆದೇಶವನ್ನು ಹಾಜರುಪಡಿಸಬೇಕೆಂದು ಸೂಚಿಸಿ 180 ದಿನಗಳ ಗಡುವು ನೀಡಿತು. ವಿಫಲವಾದರೆ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಎಚ್ಚರಿಸಿತು.
ಆದರೆ ಕಾಯಿದೆಯ ಸೆಕ್ಷನ್ 4(iii)(ಎ)(II) ಪ್ರಕಾರ ಬಾಡಿಗೆ ತಾಯ್ತನದ ಬಗ್ಗೆ ನಿರ್ಧರಿಸುವ ಮೊದಲು ಮಾತ್ರ ಮಗುವಿನ ಪಾಲನೆಯ ಪ್ರಶ್ನೆಯನ್ನು ನಿರ್ಧರಿಸಲು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅವರಿಗೆ ಅಧಿಕಾರ ವ್ಯಾಪ್ತಿ ಇದ್ದು ಬಾಡಿಗೆ ತಾಯ್ತನವನ್ನು ಅಂಗೀಕರಿಸಿದ ಬಳಿಕ ಮತ್ತು ಮಗು ಜನಿಸಿದ ನಂತರ ಅಂತ ಆದೇಶವನ್ನು ಅವರು ನೀಡುವ ಅಧಿಕಾರವಿಲ್ಲ. ಇದು ವೀಸಾ ಪಡೆಯಲು ದಂಪತಿಗೆ ಅಡ್ಡಿ ಉಂಟು ಮಾಡಿತ್ತು. ಜುಲೈ 5ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.