ಜೈಲರ್‌ಗೆ ಪಿಸ್ತೂಲ್ ತೋರಿಸಿ 2003ರಲ್ಲಿ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ (ಎಂಎಲ್‌ಎ) ಮುಖ್ತಾರ್ ಅನ್ಸಾರಿ ಅವರಿಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಬುಧವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ [ಉತ್ತರ ಪ್ರದೇಶ ಸರ್ಕಾರ ಮತ್ತು ಮುಖ್ತಾರ್ ಅನ್ಸಾರಿ ನಡುವಣ ಪ್ರಕರಣ].
ಎಕ್ಸಾಮಿನೇಷನ್-ಇನ್-ಚೀಫ್‌ನಲ್ಲಿ ನೀಡಲಾದ ಜೈಲರ್‌ಸಾಕ್ಷ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಅವರ ಪಾಟಿ ಸವಾಲನ್ನು ಮಾತ್ರ ಪರಿಗಣಿಸಿದೆ ಎಂಬ ಕಾರಣಕ್ಕಾಗಿ ಸಂಸದರು/ಶಾಸಕರ ಪ್ರಕರಣಗಳನ್ನು ಆಲಿಸುವ ವಿಶೇಷ ನ್ಯಾಯಾಲಯ 2020ರಲ್ಲಿ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರು ರದ್ದುಗೊಳಿಸಿದರು.
"ವಿಚಾರಣಾ ನ್ಯಾಯಾಲಯದ ಕ್ರಮ ಎದ್ದು ಕಾಣುವಂತೆ ತಪ್ಪಾಗಿದೆ, ಇದಾಗಲೇ ಚರ್ಚಿಸಿದಂತೆ ಇದು ಸ್ಪಷ್ಟವಾಗಿ ನಿರ್ಧರಿಸಲಾದ ಕಾನೂನಿನ ನಿಲುವಿಗೆ ವಿರುದ್ಧವಾಗಿದೆ. ವಿಚಾರಣಾ ನ್ಯಾಯಾಲಯ ನೀಡಿದ ದೋಷಯುಕ್ತ ತೀರ್ಪು ಮತ್ತು ಆದೇಶ ನಿಲ್ಲುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅನ್ಸಾರಿ ಅವರ ಕ್ರಮ ಜೈಲಿನೊಳಗೆ ಉದ್ವಿಗ್ನತೆ ಉಂಟುಮಾಡಿ ಜೈಲಿನ ಸಿಬ್ಬಂದಿ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯುಂಟು ಮಾಡುವಂತಹದ್ದಾಗಿತ್ತು. ಜೈಲಿನೊಳಗೆ ಶಾಂತಿ ಉಲ್ಲಂಘನೆ, ಗಲಭೆ ಮತ್ತು ಅಸ್ತವ್ಯಸ್ತತೆಗೆ ಕಾರಣವಾಗುವ ಸಾಧ್ಯತೆ ಇತ್ತು ಎಂದು ಪೀಠ ಅಭಿಪ್ರಾಯಪಟ್ಟಿತು.