Allahabad High Court
Allahabad High Court

ಡೆಂಗಿ ರೋಗಿಗೆ ಪ್ಲೇಟ್‌ಲೆಟ್‌ ಬದಲಿಗೆ ಜ್ಯೂಸ್: ಆಸ್ಪತ್ರೆ ಕಟ್ಟಡ ಕೆಡವುವ ನಿರ್ಧಾರಕ್ಕೆ ಅಲಾಹಾಬಾದ್ ಹೈಕೋರ್ಟ್ ತಡೆ

ಕಾನೂನು ಪ್ರಕಾರ ಸೂಕ್ತ ಆದೇಶ ನೀಡುವ ಮೊದಲು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರ ಕಟ್ಟಡದ ಮಾಲೀಕರ ಆಕ್ಷೇಪಗಳನ್ನು ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಪ್ರಕಾಶ್ ಕೇಸರ್ವಾನಿ ಮತ್ತು ವಿಕಾಸ್ ಬುಧ್ವರ್ ಅವರಿದ್ದ ಪೀಠ ತಿಳಿಸಿದೆ.

ಡೆಂಗಿ ರೋಗಿಯೊಬ್ಬರ ದೇಹಕ್ಕೆ ಪ್ಲೇಟ್‌ಲೆಟ್‌ಗಳ ಬದಲಿಗೆ ಮೋಸಂಬಿ ಜ್ಯೂಸ್ ನೀಡಿ ಆತನ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿದ್ದ ಗ್ಲೋಬಲ್ ಆಸ್ಪತ್ರೆಯ ಕಟ್ಟಡ ಕೆಡವುವ ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರದ (ಪಿಡಿಎ) ಆದೇಶಕ್ಕೆ ಅಲಾಹಾಬಾದ್ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಕಾನೂನು ಪ್ರಕಾರ ಸೂಕ್ತ ಆದೇಶ ನೀಡುವ ಮುನ್ನ ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರ ಕಟ್ಟಡದ ಮಾಲೀಕರ ಆಕ್ಷೇಪಗಳನ್ನು ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಪ್ರಕಾಶ್ ಕೇಸರ್ವಾನಿ ಮತ್ತು ವಿಕಾಸ್ ಬುಧ್ವರ್ ಅವರಿದ್ದ ಪೀಠ ತಿಳಿಸಿದೆ.

Also Read
ಪ್ರಯಾಗ್‌ರಾಜ್‌ ತೆರವು ಕಾರ್ಯಾಚರಣೆ: ನೋಟಿಸ್ ತಿರುಚಲಾಗಿದೆ ಎಂದು ಅಲಾಹಾಬಾದ್ ಹೈಕೋರ್ಟ್‌ಗೆ ತಿಳಿಸಿದ ಮೊಹಮ್ಮದ್ ಪತ್ನಿ

ಆರು ವಾರಗಳ ಅವಧಿಯವರೆಗೆ ಅಥವಾ ಆದೇಶವನ್ನು ಎರಡನೇ ಪ್ರತಿವಾದಿ ಸ್ವೀಕರಿಸುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ  ಕಟ್ಟಡ ತೆರವುಗೊಳಿಸುವ ಆದೇಶಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಪ್ರತಿವಾದಿಗಳು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಭೋಗ್ಯಕ್ಕೆ ಆಸ್ಪತ್ರೆ ನಡೆಸಲು ಕಟ್ಟಡ ನೀಡಿದ್ದ ಅದರ ಮಾಲಕಿ ಮಾಡಿದ ಮನವಿ ಮೇರೆಗೆ ಈ ಆದೇಶ ನೀಡಲಾಗಿದೆ. ಅಧಿಕಾರಿಗಳು ತನಗೆ ಯಾವುದೇ ನೋಟಿಸ್‌ ಅಥವಾ ಆದೇಶ ನೀಡಿಲ್ಲ. ಆಸ್ಪತ್ರೆಗಾಗಿ ಕಟ್ಟಡವನ್ನು ಶ್ಯಾಮ್‌ ನಾರಾಯಣ್‌ ಎಂಬುವವರಿಗೆ ಭೋಗ್ಯಕ್ಕೆ ಕೊಡಲಾಗಿದೆ. ಕಟ್ಟಡದಲ್ಲಿ ಅಕ್ರಮ ರಚನೆಗಳಿದ್ದರೆ ಅದನ್ನು ತೆರವುಗೊಳಿಸಲು ಸಿದ್ಧ ಎಂದು ಅರ್ಜಿದಾರರು ತಿಳಿಸಿದರು. ಆಗ ಸರ್ಕಾರ ʼಕಟ್ಟಡ ನಕ್ಷೆಯೊಂದಿಗೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಬಹುದು. ಅದನ್ನು ಪಿಡಿಎ ಪರಿಶೀಲಿಸಿ ಸೂಕ್ತ ಆದೇಶ ನೀಡಲಿದೆʼ ಎಂದು ತಿಳಿಸಿತು.

ಇದನ್ನು ಪರಿಗಣಿಸಿದ ನ್ಯಾಯಾಲಯ ಅರ್ಜಿದಾರರು ಎರಡು ವಾರಗಳಲ್ಲಿ ಕಟ್ಟಡದ ನಕ್ಷೆಯೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಪಿಡಿಎ ಅದನ್ನು ಆಲಿಸಿ ನಾಲ್ಕು ವಾರದೊಳಗೆ ಕಾನೂನಿನ ಪ್ರಕಾರ ಸೂಕ್ತ ಆದೇಶ ರವಾನಿಸಬೇಕು. ಕಟ್ಟಡದ ಯಾವುದೇ ಭಾಗ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಕಂಡುಬಂದರೆ ಕಾನೂನಿನ ಪ್ರಕಾರ ಮುಂದುವರೆಯಲು ಪಿಡಿಎ ಸ್ವತಂತ್ರ ಎಂದು ನ್ಯಾಯಾಲಯ ತಿಳಿಸಿತು.

Related Stories

No stories found.
Kannada Bar & Bench
kannada.barandbench.com