Allahabad High Court, Lucknow Bench & Judge
Allahabad High Court, Lucknow Bench & Judge

ಮುಸ್ಲಿಂ ವಕೀಲರ ವಿರುದ್ಧ ಧಾರ್ಮಿಕ ತಾರತಮ್ಯ: ನ್ಯಾಯಾಧೀಶರೊಬ್ಬರಿಗೆ ಅಲಾಹಾಬಾದ್ ಹೈಕೋರ್ಟ್ ಸಮನ್ಸ್

ಶುಕ್ರವಾರದ ನಮಾಜ್‌ಗೆ ತೆರಳಬೇಕಿರುವುದರಿಂದ ಸಂಕ್ಷಿಪ್ತವಾಗಿ ಪ್ರಕರಣ ಮುಂದೂಡಬೇಕು ಎಂಬ ಮುಸ್ಲಿಂ ವಕೀಲರ ಮನವಿಯನ್ನು ತಿರಸ್ಕರಿಸಿದ ಎಎಸ್‌ಜೆ ವಿವೇಕಾನಂದ ಶರಣ್ ತ್ರಿಪಾಠಿ ಅವರು ಕೆಲ ತಾರತಮ್ಯದ ಅವಲೋಕನ ಮಾಡಿದರು ಎಂದು ಆರೋಪಿಸಲಾಗಿತ್ತು.

ಮುಸ್ಲಿಂ ವಕೀಲರ ವಿರುದ್ಧ ಧಾರ್ಮಿಕ ತಾರತಮ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ಈಚೆಗೆ ಸಮನ್ಸ್‌ ನೀಡಿರುವ ಅಲಾಹಾಬಾದ್‌ ಹೈಕೋರ್ಟ್‌ ಅವರು ʼನಿರ್ದಿಷ್ಟ ಸಮುದಾಯದ ಬಗ್ಗೆ ಮಾಡಿರುವ ಅವಲೋಕನಗಳುʼ ನ್ಯಾಯಾಂಗದ ದುರ್ನಡತೆಗೆ ಉದಾಹರಣೆ ಎಂದಿದೆ [ಮೊಹಮ್ಮದ್‌ ಇದ್ರಿಸ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಬಲವಂತದ ಧಾರ್ಮಿಕ ಮತಾಂತರದ ಆರೋಪ ಹೊತ್ತಿರುವ ಇಬ್ಬರು ಮುಸ್ಲಿಂ ಧರ್ಮಗುರುಗಳಾದ ಮೊಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಖಾಜಿ ಜಹಾಂಗೀರ್ ಆಲಂ ಖಾಸ್ಮಿ ಮತ್ತಿತರರ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್‌ ಪ್ರಕರಣದ ವಿಚಾರಣೆ ವೇಳೆ ಈ ಘಟನೆ ನಡೆದಿದೆ.

ಶುಕ್ರವಾರದ ನಮಾಜ್‌ಗೆ ತೆರಳಬೇಕಿರುವುದರಿಂದ ಸಂಕ್ಷಿಪ್ತವಾಗಿ ಪ್ರಕರಣ ಮುಂದೂಡಬೇಕು ಎಂಬ ಮುಸ್ಲಿಂ ವಕೀಲರ ಮನವಿಯನ್ನು ಕಳೆದ ಜನವರಿಯಲ್ಲಿ ತಿರಸ್ಕರಿಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಲಖನೌ ಎನ್‌ಐಎ/ಎಟಿಎಸ್ ವಿಶೇಷ ನ್ಯಾಯಾಧೀಶ) ವಿವೇಕಾನಂದ ಶರಣ್ ತ್ರಿಪಾಠಿ ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲರೊಬ್ಬರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿದ್ದರು. ಮುಸ್ಲಿಂ ವಕೀಲರು ಪ್ರಾರ್ಥನೆಗೆ ತೆರಳಿದಾಗಲೆಲ್ಲಾ ಆರೋಪಿಗಳ ಪರವಾಗಿ ಅಮಿಕಸ್‌ ಕ್ಯೂರಿ ವಾದ ಮಂಡಿಸಬೇಕು ಎಂದು ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿ ಆರೋಪಿಗಳಲ್ಲಿ ಒಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶಮೀಮ್ ಅಹ್ಮದ್ ವಿಚಾರಣಾ ನ್ಯಾಯಾಲಯದ ಆದೇಶಗಳಿಗೆ ತಡೆ ನೀಡಿದ್ದರು.

ಹೈಕೋರ್ಟ್ ಆದೇಶದ ನಂತರ, ವಿಚಾರಣಾ ನ್ಯಾಯಾಲಯ ಆರೋಪಿಗಳ ಪರ ವಾದ ಮಂಡಿಸಲು ಮುಸ್ಲಿಂ ವಕೀಲರಿಗೆ ಅವಕಾಶ ನೀಡಿತ್ತಾದರೂ ಎಲೆಕ್ಟ್ರಾನಿಕ್‌ ಸಾಕ್ಷ್ಯಕ್ಕೆ ಸಂಬಂಧಿಸಿದ ಅರ್ಜಿಯ ಕುರಿತು ನಿರ್ಧರಿಸಿರಲಿಲ್ಲ.  

ಏಪ್ರಿಲ್ 3 ರ ಆದೇಶದಲ್ಲಿ ವಿಚಾರಣಾ ನ್ಯಾಯಾಲಯದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್‌ ಏಕಸದಸ್ಯ ಪೀಠ ತಾನು ನೀಡಿರುವ ತಡೆಯಾಜ್ಞೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ನ್ಯಾಯಾಧೀಶರು ವಿಫಲರಾಗಿದ್ದು ಮನಸೋ ಇಚ್ಛೆಯ ರೀತಿಯಲ್ಲಿ ಮುಂದುವರೆದಿದ್ದಾರೆ ಎಂದು ಗುಡುಗಿತ್ತು.

ಅರ್ಜಿದಾರರು ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿರುವುದರಿಂದ ವಿಚಾರಣೆಯ ಸಮಯದಲ್ಲಿ ವಕೀಲರ ಉಪಸ್ಥಿತಿಯಿಲ್ಲದಿರುವುದು ಮತ್ತು ಅಮಿಕಸ್‌ ನೇಮಕಾತಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಧೀಶರ ಅವಲೋಕನಗಳ ಕುರಿತು ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

"ಇದು ಧರ್ಮದ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಎಸಗಿರುವ ಸ್ಪಷ್ಟ  ತಾರತಮ್ಯವನ್ನು ತೋರಿಸುತ್ತದೆ, ಇದು ಸಂವಿಧಾನದ 15ನೇ ವಿಧಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಅದು ಹೇಳಿತ್ತು.

ನ್ಯಾಯಾಧೀಶರು ವೈಯಕ್ತಿಕ ನಡವಳಿಕೆಗಳಲ್ಲಿ ಮಧ್ಯಪ್ರವೇಶಿಸುವುದು ಅವರ ನ್ಯಾಯಿಕ ಸಮಗ್ರತೆಯನ್ನು ಪ್ರಶ್ನಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಾನು ಈ ಹಿಂದೆ ನೀಡಿದ್ದ ತಡೆಯಾಜ್ಞೆ ಮುಂದುವರೆಸಿದ ನ್ಯಾಯಾಲಯ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ಬಂಧ ವಿಧಿಸಿತ್ತು. ಜೊತೆಗೆ ನ್ಯಾಯಾಂಗ ಅಧಿಕಾರಿಗೆ ಸಮನ್ಸ್‌ ಕೂಡ ನೀಡಿತ್ತು.

ಸೋಮವಾರ ಏಕಸದಸ್ಯ ಪೀಠದೆದುರು ಹಾಜರಾದ ನ್ಯಾಯಾಧೀಶ ತ್ರಿಪಾಠಿ ಅವರು ಬೇಷರತ್ ಕ್ಷಮೆಯಾಚಿಸಿದರು. ತಾನು ತಪ್ಪು ಕಲ್ಪನೆಯಿಂದ ಆದೇಶ ನೀಡಿದ್ದು ಮುಂದೆ ಜಾಗರೂಕವಾಗಿರುವುದಾಗಿ ತಿಳಿಸಿದರು.

ನ್ಯಾಯಾಧೀಶರ ಪರ ವಕೀಲರು ವೈಯಕ್ತಿಕ ಅಫಿಡವಿಟ್ ಸಲ್ಲಿಸಲು ಸ್ವಲ್ಪ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಾಲಯ ಅವರಿಗೆ ಎರಡು ದಿನಗಳ ಕಾಲಾವಕಾಶ ನೀಡಿ ಏಪ್ರಿಲ್ 18ಕ್ಕೆ (ನಾಳೆಗೆ) ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com