ನ್ಯಾಯಾಲಯದ ವ್ಯಾಪ್ತಿಯಲ್ಲಿ ವಕೀಲರಿಂದ ಇನಾಮಿನ ರೂಪದಲ್ಲಿ ಪೇಟಿಎಂನಲ್ಲಿ ಹಣ ಸಂಗ್ರಹಿಸುತ್ತಿದ್ದ ಜಮಾದಾರ್ ಒಬ್ಬರನ್ನು ಗುರುವಾರ ಅಲಾಹಾಬಾದ್ ಹೈಕೋರ್ಟ್ ಅಮಾನತು ಮಾಡಿದೆ.
ನ್ಯಾಯಮೂರ್ತಿ ಅಜಿತ್ ಸಿಂಗ್ ಅವರ ನ್ಯಾಯಾಲಯದಲ್ಲಿ ಜಮಾದಾರ್ ಆಗಿರುವ ವ್ಯಕ್ತಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ.
ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರಿಂದ ಭಕ್ಷೀಸು ಪಡೆಯಲು ಪೇಟಿಎಂ ವಾಲೆಟ್/ಕ್ಯೂಆರ್ ಕೋಡ್ ಅನ್ನು ಜೊತೆಗಿಟ್ಟುಕೊಂಡಿದ್ದ ಜಮಾದಾರ್ ರಾಜೇಂದ್ರ ಕುಮಾರ್ ವಿರುದ್ದ ಕ್ರಮಕೈಗೊಳ್ಳಲು ಮುಖ್ಯ ನ್ಯಾಯಮೂರ್ತಿ ಬಿಂದಾಲ್ ಅವರಿಗೆ ನ್ಯಾ. ಸಿಂಗ್ ಅವರು ಪತ್ರ ಬರೆದಿದ್ದರು.
ರಿಜಿಸ್ಟ್ರಾರ್ ಜನರಲ್ ಆಶೀಷ್ ಗರ್ಗ್ ಅವರು “ನ್ಯಾ. ಅಜಿತ್ ಸಿಂಗ್ ಅವರು ಪತ್ರದ ಮುಖೇನ ಮುಖ್ಯ ನ್ಯಾಯಮೂರ್ತಿ ಅವರಿಗೆ ರಾಜೇಂದ್ರ ಕುಮಾರ್ ಅವರು ಪೇಟಿಎಂ ಮೂಲಕ ಹಣ ಸಂಗ್ರಹಿಸುತ್ತಿರುವ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಅಮಾನತು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಅಮಾನತು ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರನ್ನು ನಜರತ್ ವಿಭಾಗಕ್ಕೆ ಹಾಕಲಾಗಿದ್ದು, ರಿಜಿಸ್ಟ್ರಾರ್ ಅನುಮತಿ ಪಡೆಯದೇ ಹೊರಹೋಗದಂತೆ ಆದೇಶ ಮಾಡಲಾಗಿದೆ. ಬೇರೆ ಯಾವುದೇ ಉದ್ಯೋಗ, ವ್ಯವಹಾರ, ವೃತ್ತಿಯಲ್ಲಿ ತೊಡಗಿಕೊಂಡಿಲ್ಲ ಎಂಬುದರ ಕುರಿತು ಸರ್ಟಿಫಿಕೇಟ್ ಸಲ್ಲಿಸಿದ ಬಳಿಕ ರಾಜೇಂದ್ರ ಕುಮಾರ್‌ಗೆ ಜೀವನ ಭತ್ಯೆ ಪಾವತಿಸಲಾಗುವುದು ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.