ಉತ್ತರ ಪ್ರದೇಶ ಸಿಎಂ 'ಯೋಗಿ' ಶೀರ್ಷಿಕೆ ಬಳಸಬಾರದೆಂದು ಕೋರಿದ್ದ ಪಿಐಎಲ್ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್‌

ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ತಡೆಯುವ ಸಲುವಾಗಿ ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿದ ಪೀಠ.
ಉತ್ತರ ಪ್ರದೇಶ ಸಿಎಂ 'ಯೋಗಿ' ಶೀರ್ಷಿಕೆ ಬಳಸಬಾರದೆಂದು ಕೋರಿದ್ದ ಪಿಐಎಲ್ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್‌
A1

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಪೂರ್ಣ ಹೆಸರನ್ನು ಬಹಿರಂಗಪಡಿಸಬೇಕು ಮತ್ತು ಅಧಿಕೃತ ದಾಖಲೆಗಳಲ್ಲಿ ಯೋಗಿ ಶೀರ್ಷಿಕೆ ಬಳಸದಂತೆ ತಡೆಯಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ತಡೆಯುವ ಸಲುವಾಗಿ ಅರ್ಜಿದಾರರಿಗೆ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಪಿಯೂಷ್ ಅಗರವಾಲ್ ಅವರಿದ್ದ ಪೀಠ ₹1 ಲಕ್ಷ ದಂಡ ವಿಧಿಸಿತು. ದಂಡದ ಮೊತ್ತವನ್ನು ಭಾರದ್ವಜ ಆಶ್ರಮದ ವಿಕಲಾಂಗ ಕೇಂದ್ರದ ಹೆಸರಿನಲ್ಲಿ ಆರು ವಾರಗಳೊಳಗೆ ಠೇವಣಿ ಇಡುವಂತೆ ಅದು ತಾಕೀತು ಮಾಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿವಿಧ ಸ್ಥಳಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ವಿವಿಧ ಹೆಸರನ್ನು ಬಳಸುತ್ತಿದ್ದಾರೆ. ಅವರ ನಿಜವಾದ ಹೆಸರು ತಿಳಿಸುವಂತೆ ಕೋರಿ ತಾವು ಮಾಹಿತಿ ಹಕ್ಕಿನ ಅಡಿ ಸಲ್ಲಿಸಿದ್ದ ಅರ್ಜಿಯಡಿ ಮಾಹಿತಿಯನ್ನು ಈವರೆಗೆ ಒದಗಿಸಲಾಗಿಲ್ಲ ಎಂದು ಅರ್ಜಿದಾರರು ವಿವರಿಸಿದ್ದರು.

ಇತ್ತ ಸರ್ಕಾರದ ಪರ ವಕೀಲರು ಅರ್ಜಿ ಸಲ್ಲಿಸಿರುವ ರಾಜಕೀಯ ವ್ಯಕ್ತಿ ತನ್ನ ವಿವರಗಳನ್ನು ಬಹಿರಂಗಪಡಿಸಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ ಮುಖ್ಯಮಂತ್ರಿಯವರನ್ನು ಖಾಸಗಿ ವ್ಯಕ್ತಿಯಾಗಿ ಪ್ರಕರಣದಲ್ಲಿ ಒಳಗೊಳ್ಳಲಾಗಿದೆ ಎಂದು ಆಕ್ಷೇಪಿಸಲಾಯಿತು. ಇವುಗಳನ್ನು ಪರಿಗಣಿಸಿದ ನ್ಯಾಯಾಲಯವು ಅರ್ಜಿದಾರರು ವಸ್ತು ಸ್ಥಿತಿ ಮರೆ ಮಾಚಿದ್ದಾರೆ. ಅರ್ಜಿಯು ತಪ್ಪು ಗ್ರಹಿಕೆಯಿಂದ ದಾಖಲಾಗಿದ್ದು, ದುರುದ್ದೇಶ ಹೊಂದಿದೆ ಎಂದು ವಜಾಗೊಳಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com