
ನಾಲ್ಕು ದಶಕಗಳ ಹಿಂದೆ ಅಂದರೆ 1981 ಮತ್ತು 1989 ರ ನಡುವಿನ ಅವಧಿಯಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (ಯುಪಿಎಸ್‌ಆರ್‌ಟಿಸಿ) ಬಸ್ ಮತ್ತು ಟ್ಯಾಕ್ಸಿಗಳನ್ನು ಬಳಸಿದ್ದ ಕಾಂಗ್ರೆಸ್ ಮೂರು ತಿಂಗಳೊಳಗೆ ₹2.66 ಕೋಟಿ ಪಾವತಿಸಬೇಕು ಎಂದು ಅಲಾಹಾಬಾದ್ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ [ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ರಾಜಕೀಯ ದ್ವೇಷದ ಕಾರಣಕ್ಕೆ ಪ್ರಕರಣ ಜೀವ ಪಡೆದಿದೆ ಎಂಬ ಆರೋಪವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಮನೀಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ನ್ಯಾಯಾಲಯ ದಂಡದ ಮೊತ್ತವನ್ನು ಶೇ 5ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿತು.
ಸರ್ಕಾರ ಬದಲಾದ ನಂತರ ರಾಜಕೀಯ ದ್ವೇಷದ ಕಾರಣಕ್ಕೆ ಮೊತ್ತವನ್ನು ತಪ್ಪಾಗಿ ವಸೂಲಿ ಮಾಡಲಾಗುತ್ತಿದೆ ಮುಂತಾಗಿ ತಾಂತ್ರಿಕ ಕಾರಣ ನೀಡುವ ಮೂಲಕ, ಹಣ ಪಾವತಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.
ಕಾಂಗ್ರೆಸ್‌ನ ರಾಜಕೀಯ ಸಮಾವೇಶ ಮತ್ತಿತರ ಕಾರ್ಯಕ್ರಮಗಳಿಗಾಗಿ ಯುಪಿಎಸ್‌ಆರ್‌ಟಿಸಿ ವಾಹನಗಳನ್ನು ಒದಗಿಸಿಸಲಾಗಿತ್ತು ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿತು.