ನ್ಯಾಯಮೂರ್ತಿಗಳ ವಿರುದ್ಧ ಆರೋಪ: ಕ್ಷಮೆ ಕೋರಿದ ವಕೀಲನ ವಿರುದ್ಧದ ಮೂರು ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್‌

ವಕೀಲ ಅನಿಲ್‌ ಅವರನ್ನು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಪಡೆದು, ಫೆಬ್ರವರಿ 10ರಂದು ಪೀಠದ ಮುಂದೆ ಹಾಜರುಪಡಿಸುವಂತೆ ಫೆಬ್ರವರಿ 2ರಂದು ನಿರ್ದೇಶಿಸಿದ್ದ ಹೈಕೋರ್ಟ್‌.
Karnataka HC Chief Justice P B Varale and Justice Ashok S Kinagi
Karnataka HC Chief Justice P B Varale and Justice Ashok S Kinagi

ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಗುರುತರ ಆರೋಪ ಮಾಡಿದ್ದ ವಕೀಲರೊಬ್ಬರ ಬೇಷರತ್‌ ಕ್ಷಮೆಯನ್ನು ಪರಿಗಣಿಸಿ ಅವರ ವಿರುದ್ಧದ ಮೂರು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಕೈಬಿಟ್ಟಿದೆ. ಫೆಬ್ರವರಿ 2ರಂದು ಆರೋಪಿ ವಕೀಲ ಕೆ ಎಸ್‌ ಅನಿಲ್‌ ಅವರನ್ನು ಒಂದು ವಾರದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಹೈಕೋರ್ಟ್‌ ನೀಡಿತ್ತು.

ಬೆಂಗಳೂರಿನ ಗವಿಪುರಂನ ವಕೀಲ ಕೆ ಎಸ್‌ ಅನಿಲ್‌ ಅವರು ಸಲ್ಲಿಸಿದ್ದ ಕ್ಷಮೆಯನ್ನು ಪರಿಗಣಿಸಿ ಅವರ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡಲಾಗಿದೆ. ಆರೋಪಿ ಅನಿಲ್‌ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿದೆ.

“ಹೈಕೋರ್ಟ್‌ನ ಮೊದಲ ಮತ್ತು ನಾಲ್ಕನೇ ಪೀಠದ ಮುಂದೆ ಇರುವ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ಕ್ಷಮೆ ಕೋರುತ್ತಿದ್ದೇನೆ” ಎಂದು ಫೆಬ್ರವರಿ 7ರಂದು ಸಲ್ಲಿಸಿರುವ ಮೆಮೊ ಹಾಗೂ ಲಿಖಿತ ಹೇಳಿಕೆಯಲ್ಲಿ ಅನಿಲ್‌ ಉಲ್ಲೇಖಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಫಿಡವಿಟ್‌ ಸಹ ಸಲ್ಲಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

“ವಿಚಾರಣಾಧೀನ ನ್ಯಾಯಾಲಯದಲ್ಲಿ ಕಿರಿಯ ವಕೀಲನಾಗಿ ಕೆಲಸ ಮಾಡುತ್ತಿದ್ದು, ದೈಹಿಕ ಬೇನೆ, ಮಾನಸಿಕ ಒತ್ತಡ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತವಿಲ್ಲ ಮತ್ತು ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿ ಅನುಭವ ಹೊಂದಿಲ್ಲ. ಹಿರಿಯ ವಕೀಲರಿಂದ ಮಾರ್ಗದರ್ಶನವಾಗಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ ಫೆಬ್ರವರಿ 7ರಂದು ಜೈಲು ಅಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ಕ್ಷಮೆ ಕೋರಿ ಅಫಿಡವಿಟ್‌ ಸಲ್ಲಿಸಿದ್ದಾರೆ. ಅಲ್ಲದೇ, ತಮ್ಮ ವಿರುದ್ಧ ಹೈಕೋರ್ಟ್‌ನಲ್ಲಿ ಆರು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಇವೆ ಎಂದೂ ತಿಳಿಸಿದ್ದಾರೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ.

ಹಲವು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ್ದರೂ, ಈ ನ್ಯಾಯಾಲಯದಲ್ಲಿ ಮೂರು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣಗಳು ಪರಿಗಣನೆಗೆ ಬಾಕಿ ಇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿರುವ ಕ್ಷಮೆಯನ್ನು ಪರಿಗಣಿಸಿ ಅವುಗಳನ್ನು ಇತ್ಯರ್ಥಪಡಿಸಲಾಗಿದೆ. ತಕ್ಷಣ ಆರೋಪಿಯನ್ನು ಬಿಡುಗಡೆ ಮಾಡಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಫೆಬ್ರವರಿ 2ರಂದು ನ್ಯಾಯಾಲಯವು ಆರೋಪಿ ವಕೀಲ ಅನಿಲ್‌ ಅವರು ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿರುವುದನ್ನು ನೋಡಿದರೆ ಅವರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವವಿಲ್ಲ ಎಂಬುದು ತಿಳಿಯುತ್ತದೆ. “ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲರಾದ ಆರೋಪಿಯು ಹಿಂದೆಯೂ ಉತ್ತಮ ನಡತೆ ತೋರಿಲ್ಲ. ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಅವರು ಗುರುತರ ಆರೋಪ ಮಾಡಿದ್ದಾರೆ. ಈ ಮೂಲಕ ಸಂಸ್ಥೆಯ ಘನತೆಯನ್ನು ತಗ್ಗಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಗೌರವ ತಗ್ಗುವಂತೆ ಮಾಡಿದ್ದಾರೆ” ಎಂದು ಆದೇಶದಲ್ಲಿ ಹೇಳಿತ್ತು.

ಹೀಗಾಗಿ, ನ್ಯಾಯಾಂಗ ನಿಂದನೆಗೆ ಗುರಿಯಾಗಿರುವ ಅನಿಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವುದನ್ನು ಬಿಟ್ಟು ಬೇರೆ ಮಾರ್ಗ ತನಗೆ ಇಲ್ಲ. ಆದ್ದರಿಂದ, ಅನಿಲ್‌ ಅವರನ್ನು ಒಂದು ವಾರ ಕಾಲ ನ್ಯಾಯಾಂಗ ಬಂಧನಕ್ಕೆ ಪಡೆದು, ಫೆಬ್ರವರಿ 10ರಂದು ಪೀಠದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಶುಕ್ರವಾರ (ಫೆ.10) ನ್ಯಾಯಾಲಯದ ಮುಂದೆ ಹಾಜರಾದ ವಕೀಲ ಅನಿಲ್‌ ಅವರು ಕ್ಷಮೆ ಕೋರಿ ಅಫಿಡವಿಟ್‌ ಸಲ್ಲಿಸಿದ್ದರಿಂದ ನ್ಯಾಯಾಲಯವು ಪ್ರಕರಣ ಇತ್ಯರ್ಥಪಡಿಸಿದೆ.

Kannada Bar & Bench
kannada.barandbench.com