ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಪುತ್ರ ಹಾಗೂ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ನೇಮಕ ಮಾಡಲು ಹಾಲಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹುನ್ನಾರ ನಡೆಸಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸತ್ರ ನ್ಯಾಯಾಲಯವು ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಎಸ್ ಎನ್ ಕೆಂಪಣ್ಣ, ಎಚ್ ಎಂ ಶಂಕರಪ್ಪ, ಎನ್ ಎಂ ಉಮೇಶ್, ಕೆ ಎನ್ ರಾಜಕುಮಾರ್ ಶಾಸ್ತ್ರಿ, ಸಿ ವಿ ಕುಮಾರ್ ಅವರು ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 9ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶೆ ಮುಮ್ತಾಜ್ ಅವರು ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವುದಕ್ಕೂ ಮುನ್ನ ಪ್ರತಿವಾದಿಗಳನ್ನು ಆಲಿಸಬೇಕಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ. ಅಲ್ಲದೇ, ಶ್ಯಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಡಾ. ಎನ್ ತಿಪ್ಪಣ್ಣ ಅವರಿಗೆ ನೋಟಿಸ್ ಹಾಗೂ ಸಮನ್ಸ್ ಜಾರಿ ಮಾಡಿದ್ದಾರೆ.
2020ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸೊಸೈಟಿಯ ಹೆಸರಿನಲ್ಲಿ ವೀರಶೈವಕ್ಕೆ ತಿದ್ದುಪಡಿ ತಂದು ವೀರಶೈವ-ಲಿಂಗಾಯತ ಎಂದು ಬದಲಿಸಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಿನ ತಿದ್ದುಪಡಿ ಮಾಡಲಾದ ಸೊಸೈಟಿಯ ಸಂವಿಧಾನ ಪಡೆದು, ಈ ದಾವೆಯನ್ನು ಹೂಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಡಿಸೆಂಬರ್ 23-26ರವರೆಗೆ ಅಖಿಲ ಭಾರತ ವೀರಶೈವ ಸಮುದಾಯದ ವಾರ್ಷಿಕ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಇಲ್ಲಿ ಮಲ್ಲಿಕಾರ್ಜುನ್ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿ ನೇಮಕ ಮಾಡಲು ದುಷ್ಟ ಪ್ರಯತ್ನ ಮಾಡಿದ್ದಾರೆ. ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಸೊಸೈಟಿ ಹೆಸರನ್ನು ಶ್ಯಾಮನೂರು ಶಿವಶಂಕರಪ್ಪ ಮತ್ತು ಈಶ್ವರ್ ಖಂಡ್ರೆ ಬದಲಿಸಿದ್ದಾರೆ. ಇದು ಅಧಿಕಾರದ ದುರುಪಯೋಗವಾಗಿದ್ದು, ಪ್ರತಿವಾದಿಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡದಿದ್ದರೆ ಅವರು ಅಕ್ರಮವಾಗಿ ಮಲ್ಲಿಕಾರ್ಜುನ್ ಅವರನ್ನು ಸೊಸೈಟಿಯ ಅಧ್ಯಕ್ಷರನ್ನಾಗಿಸಲಿದ್ದಾರೆ ಎಂದು ವಾದಿಸಲಾಗಿದೆ.
ವೀರಶೈವ-ಲಿಂಗಾಯತ ಎಂದು ತಿದ್ದುಪಡಿ ಮಾಡುವ ಮೂಲಕ ಪ್ರತಿವಾದಿಗಳು ಪ್ರಮಾದವೆಸಗಿದ್ದಾರೆ. ಈ ಮೂಲಕ ಸಮುದಾಯದವರ ಹಾದಿ ತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಜೊತೆಗಿರುವ ಲಿಂಗಾಯತ ಪದವನ್ನು ತೆಗೆಯಬೇಕು. ಅಲ್ಲದೇ, ಶಿವಶಂಕರಪ್ಪ ಮತ್ತು ಖಂಡ್ರೆ ಅವರನ್ನು ಮಹಾಸಭಾದ ಹುದ್ದೆಗಳಿಂದ ತೆಗೆಯಬೇಕು. ಈ ಇಬ್ಬರೂ ರಾಜಕೀಯ ಪಕ್ಷದ ಭಾಗವಾಗಿರುವುದರಿಂದ ಸೊಸೈಟಿಯ ಹಿತ ಕಾಯುವ ಏಕೈಕ ದೃಷ್ಟಿಯಿಂದ ದಾವೆ ಹೂಡಲಾಗಿದೆ ಎಂದು ವಿವರಿಸಲಾಗಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು 2023ರ ಫೆಬ್ರವರಿ 17ಕ್ಕೆ ಮುಂದೂಡಿದೆ.