ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್ ಹಾಗೂ ಅವರ ಕುಟುಂಬದ ಇತರೆ ಐವರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಆರೋಪದ ಕ್ರಿಮಿನಲ್ ಪ್ರಕರಣದಲ್ಲಿ ತನಿಖಾಧಿಕಾರಿಯನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸದೆ ಪಾಟಿ ಸವಾಲಿನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿರುವ ಹಿರಿಯ ವಕೀಲ ಎಂ ಎಸ್ ಶ್ಯಾಮ್‌ಸುಂದರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಬುಧವಾರ ಪ್ರಕಟಿಸಿತು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಆದೇಶವನ್ನು ಸರ್ಕಾರದ ಪರ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್ ಅವರು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಎಂ ಎಸ್ ಶ್ಯಾಮ್‌ಸುಂದರ್ ಅವರು “ಈ ಪ್ರಕರಣದಲ್ಲಿನ ದೂರಿಗೂ ಮತ್ತು ತನಿಖಾಧಿಕಾರಿ ಸಲ್ಲಿಸಿರುವ ಆರೋಪಪಟ್ಟಿಗೂ ಯಾವುದೇ ಹೋಲಿಕೆ ಇಲ್ಲ. ತನಿಖಾಧಿಕಾರಿಯು, ದೂರಿನಲ್ಲಿ ಉಲ್ಲೇಖಿಸಿದ್ದ ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟು ಬೇರೊಬ್ಬ ಆರೋಪಿಯ ಪರ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದೇ ತನಿಖಾಧಿಕಾರಿ ಸಾಕ್ಷಿ ಕಟ್ಟೆಯಲ್ಲಿಯೂ ಇದೇ ಅಂಶವನ್ನು ನುಡಿದಿರುತ್ತಾರೆ. ಆದರೆ, ದೂರಿನಲ್ಲಿ ನಮೂದಿಸಿರುವ ಆರೋಪಿಗಳ ಬಗ್ಗೆ ನುಡಿಯದೆ ಇರುವುದರಿಂದ ದೂರುದಾರನ ಪ್ರಕರಣಕ್ಕೆ ಧಕ್ಕೆ ಉಂಟಾಗಬಹುದು. ಹಾಗಾಗಿ, ತನಿಖಾಧಿಕಾರಿಯನ್ನು ಕೇವಲ ಪ್ರತಿಕೂಲ ಸಾಕ್ಷಿ ಎಂದು ಮಾತ್ರವೇ ಪರಿಗಣಿಸದೆ, ಪಾಟಿ ಸವಾಲಿನಲ್ಲಿ ಕೇಳಬಹುದಾದ ಎಲ್ಲ ಪ್ರಶ್ನೆಗಳನ್ನು ಕೇಳುವುದಕ್ಕೆ ಅನುವು ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದರು.