ಸ್ಮಾರ್ಟ್‌ ಮೀಟರ್‌ ಅಳವಡಿಕೆಯಲ್ಲಿ ಅಕ್ರಮ ಆರೋಪ: ಲೋಕಾಯುಕ್ತ ಪೊಲೀಸರಿಂದ ವರದಿ ಕೇಳಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ

“ಒಂದು ರಾಜಕೀಯ ಪಕ್ಷದ ವಿರುದ್ಧ ಮತ್ತೊಂದು ರಾಜಕೀಯ ಪಕ್ಷವು ಕ್ರಿಮಿನಲ್‌ ಪ್ರಕರಣ ದಾಖಲಿಸುವ ಸಂಸ್ಕೃತಿಯನ್ನು ತಮಿಳುನಾಡಿನಲ್ಲಿ ಕಂಡಿದ್ದೆವು. ಈಗ ನಮ್ಮ ರಾಜ್ಯವೂ ಅದನ್ನು ನಕಲು ಮಾಡುತ್ತಿರುವಂತಿದೆ” ಎಂದು ಲಘು ದಾಟಿಯಲ್ಲಿ ಹೇಳಿದ ನ್ಯಾಯಾಲಯ.
ಸ್ಮಾರ್ಟ್‌ ಮೀಟರ್‌ ಅಳವಡಿಕೆಯಲ್ಲಿ ಅಕ್ರಮ ಆರೋಪ: ಲೋಕಾಯುಕ್ತ ಪೊಲೀಸರಿಂದ ವರದಿ ಕೇಳಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ
Published on

ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಅಕ್ರಮ ನಡೆದಿರುವುದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಬೇಕು ಎಂದು ಆದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿದೆ.

ಖಾಸಗಿ ದೂರು ದಾಖಲಿಸಲು ಕಚೇರಿಗೆ ನಿರ್ದೇಶಿಸಿರುವುದು ಮತ್ತು ಸ್ಮಾರ್ಟ್‌ ಮೀಟರ್‌ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ತಡೆ ನೀಡಿದೆ.

Justice M I Arun
Justice M I Arun

ಬಿಎನ್‌ಎಸ್‌ಎಸ್‌ ಸೆಕ್ಷನ್‌ 175 (4) ಮತ್ತು 223 (2) ಮತ್ತು ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್‌ 17ಎಗೆ ವಿರುದ್ಧವಾಗಿ ವಿಚಾರಣಾಧೀನ ನ್ಯಾಯಾಲಯವು ಆಕ್ಷೇಪಾರ್ಹ ಆದೇಶ ಮಾಡಿದೆ ಎಂದು ಅರ್ಜಿದಾರರ ಪರ ವಕೀಲ ಸಿ ವಿ ನಾಗೇಶ್‌ ವಾದಿಸಿದ್ದಾರೆ. ಹೀಗಾಗಿ, ಜುಲೈ 27ರ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿದ್ದು, ಆಗಸ್ಟ್‌ 20ಕ್ಕೆ ನ್ಯಾಯಾಲಯ ವಿಚಾರಣೆ ಮುಂದೂಡಿದೆ.

ಅಲ್ಲದೇ, ಪ್ರತಿವಾದಿಗಳಾದ ಲೋಕಾಯುಕ್ತ, ಡಾ.ಸಿ ಎನ್‌ ಅಶ್ವತ್ಥ ನಾರಾಯಣ, ಎಸ್‌ ಆರ್‌ ವಿಶ್ವನಾಥ್ ಮತ್ತು ಧೀರಜ್‌ ಮುನಿರಾಜು ಅವರಿಗೆ ನ್ಯಾಯಾಲಯ ನೋಟಿಸ್‌ ಜಾರಿಗೊಳಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪ್ರಕರಣದಲ್ಲಿ ಆರೋಪಿಗಳಾಗಿರುವವರು ಮಂತ್ರಿಯೂ ಸೇರಿದಂತೆ ಸಾರ್ವಜನಿಕ ಸೇವಕರಾಗಿದ್ದಾರೆ. ಪ್ರಾಸಿಕ್ಯೂಷನ್‌ ಆರಂಭಿಸಿ, ಸಂಜ್ಞೇ ಪರಿಗಣಿಸಿದಾಗ ಸಾರ್ವಜನಿಕ ಸೇವಕರಿಗೆ ಎರಡು ಹಂತದಲ್ಲಿ ರಕ್ಷಣೆ ಇರುತ್ತದೆ. ಸಾರ್ವಜನಿಕ ಸೇವಕರಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17A ಅಡಿ ರಕ್ಷಣೆ ಇರುತ್ತದೆ. ಈ ಆಕ್ಷೇಪಾರ್ಹವಾದ ಆದೇಶವನ್ನು ಮಾಡುವಂತೆಯೇ ಇಲ್ಲ. ನಾವು ನಿರ್ಧಾರ ಕೈಗೊಂಡಿರುವುದರಿಂದ ಅಪರಾಧ ಆರಂಭವಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಪಿಸಿ ಕಾಯಿದೆ ಸೆಕ್ಷನ್‌ 17A ಅಡಿ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕ ಸೇವಕ ವಿರುದ್ಧ ಯಾವುದೇ ಪೊಲೀಸ್‌ ಅಧಿಕಾರಿ ತನಿಖೆ ನಡೆಸುವಂತಿಲ್ಲ ಎಂದು ಕಾಯಿದೆ ಹೇಳುತ್ತದೆ. ಇಲ್ಲಿ ವಿಚಾರಣಾಧೀನ ನ್ಯಾಯಾಲಯವು ಅವಕಾಶ ಇಲ್ಲದಿದ್ದರೂ ವರದಿ ಕೇಳಿದೆ” ಎಂದರು.

ದೂರುದಾರರಾದ ಬಿಜೆಪಿ ನಾಯಕರ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ವರದಿ ನೀಡಿದ ಬಳಿಕ ಮ್ಯಾಜಿಸ್ಟ್ರೇಟ್‌ ಅವರು ಮೇಲಿನ ಶ್ರೇಣಿಯ ಅಧಿಕಾರಿಗಳಿಂದ ವರದಿ ಕೇಳುತ್ತಾರೆ. ಇಲ್ಲಿ ವಿಚಾರಣಾಧೀನ ನ್ಯಾಯಾಲಯವು ವರದಿ ನೀಡುವಂತೆ ಆದೇಶಿಸಿದೆಯಷ್ಟೇ. ಇದು ಇನ್ನೂ ಪ್ರಾಥಮಿಕ ಹಂತದ ಪ್ರಕ್ರಿಯೆಯಾಗಿದೆ. ಹೀಗಾಗಿ, ತಡೆ ನೀಡಬಾರದು” ಎಂದರು.

ವಿಚಾರಣೆ ಆರಂಭಕ್ಕೂ ಮುನ್ನ ಪೀಠವು “ಒಂದು ರಾಜಕೀಯ ಪಕ್ಷದ ವಿರುದ್ಧ ಮತ್ತೊಂದು ರಾಜಕೀಯ ಪಕ್ಷವು ಕ್ರಿಮಿನಲ್‌ ಪ್ರಕರಣ ದಾಖಲಿಸುವ ಸಂಸ್ಕೃತಿ ತಮಿಳುನಾಡಿನಲ್ಲಿ ಇರುವುದನ್ನು ಕಂಡಿದ್ದೇವೆ. ಈಗ ನಮ್ಮ ರಾಜ್ಯವೂ ಅದನ್ನು ನಕಲು ಮಾಡಿದಂತಿದೆ. ಒಂದು ಬಾರಿ ಇವರು, ಇನ್ನೊಂದು ಬಾರಿ ಅವರು ಅಧಿಕಾರದಲ್ಲಿರುತ್ತಾರೆ” ಎಂದು ಲಘು ದಾಟಿಯಲ್ಲಿ ಹೇಳಿತು.

ಸಚಿವ ಜಾರ್ಜ್‌ ಪರವಾಗಿ ವಕೀಲ ಶತಭಿಷ್‌ ಶಿವಣ್ಣ ವಕಾಲತ್ತು ವಹಿಸಿದ್ದಾರೆ. ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಸಹ ಹಾಜರಿದ್ದರು.

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ ಕಾನೂನು ಬಾಹಿರವಾಗಿದೆ ಮತ್ತು ಈ ಟೆಂಡರ್‌ ನೀಡಿಕೆಯಿಂದ ಅಂದಾಜು ₹16 ಸಾವಿರ ಕೋಟಿ ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕರಾದ ಡಾ.ಸಿ ಎನ್‌ ಅಶ್ವತ್ಥ ನಾರಾಯಣ, ಎಸ್‌ ಆರ್‌ ವಿಶ್ವನಾಥ್ ಮತ್ತು ಧೀರಜ್‌ ಮುನಿರಾಜು ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಸ್ಮಾರ್ಟ್‌ ಮೀಟರ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 26ರಂದು ಟೆಂಡರ್‌ ಕರೆಯಲಾಗಿತ್ತು. ಬಿಡ್‌ದಾರರಾದ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಎಂಬ ಶೆಲ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಮುಂದುವರೆದು, ಈ ಟೆಂಡರ್‌ ಅನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಪ್ರತ್ಯೇಕ ಟೆಂಡರ್‌ ಕರೆಯದೆ ಬೆಸ್ಕಾಂ ಕಂಪನಿ ಮೂಲಕವೇ ನೇರವಾಗಿ ಟೆಂಡರ್‌ ನೀಡಲಾಗಿದೆ. ಇದರಿಂದ ಅಂದಾಜು ₹16 ಸಾವಿರ ಕೋಟಿ ಮೊತ್ತವನ್ನು ಪಡೆಯುವ ಅಕ್ರಮ ನಡೆದಿದೆ. ಕಾನೂನು ಬಾಹಿರವಾದ ಈ ಪ್ರಕ್ರಿಯೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000 ಹಾಗೂ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿತ್ತು.

ಸಚಿವ ಕೆ ಜೆ ಜಾರ್ಜ್‌, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್‌ ಜೆ ರಮೇಶ್‌ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಇದನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರು ದಾಖಲಿಸಿಕೊಂಡು, ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ವರದಿ ನೀಡಲು ಆದೇಶಿಸಿತ್ತು. ಇದಕ್ಕೆ ಈಗ ಹೈಕೋರ್ಟ್‌ ತಡೆ ನೀಡಿದೆ. 

Kannada Bar & Bench
kannada.barandbench.com