ಬೆಂಗಳೂರಿನ ಜಯನಗರದಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸುಮಾರು ಮೂರು ಎಕರೆ ಭೂಮಿಯನ್ನು ಬಿಲ್ಡರ್ ಒಬ್ಬರಿಗೆ ಡಿನೋಟಿಫೈ ಮಾಡಿಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮ್ ಭಟ್ ವಿರುದ್ಧ ಲೋಕಾಯುಕ್ತದಲ್ಲಿ ಬುಧವಾರ ದೂರು ದಾಖಲಾಗಿದೆ.
ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಅವರು ನೀಡಿದ ದೂರನ್ನು ಲೋಕಾಯುಕ್ತ ಪೊಲೀಸರು ಸ್ವೀಕರಿಸಿದ್ದಾರೆ. ಸ್ವೀಕೃತಿ ಪ್ರತಿಯ ಆರೋಪದ ವಿಭಾಗದಲ್ಲಿ ಭ್ರಷ್ಟಾಚಾರ, ನಿರ್ಲಕ್ಷ್ಯ, ಕರ್ತವ್ಯ ಲೋಪ ಎಂದು ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಸಬಾ ಹೋಬಳಿಯ ಲಾಲ್‌ಬಾಗ್ ಸಿದ್ಧಾಪುರ ಗ್ರಾಮದಲ್ಲಿ (ಜಯನಗರ 1ನೇ ಬ್ಲಾಕ್) ಸರ್ವೆ ನಂ. 27/1, 28/4, 28/5 ಮತ್ತು 28/6ರಲ್ಲಿನ 2 ಎಕರೆ 39.5 ಗುಂಟೆ ಜಮೀನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಪ್ರಕಾರ ಉದ್ಯಾನ-ಸಾರ್ವಜನಿಕ ಬಳಕೆಗೆ ಮೀಸಲಿಡಲಾಗಿದೆ. ನಿಯಮಗಳ ಪ್ರಕಾರ ಇಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂದು ವಿವರಿಸಲಾಗಿದೆ.
ಆಕ್ಷೇಪಾರ್ಹವಾದ ಜಮೀನಿನ ಪಕ್ಕದಲ್ಲಿ ಹಲವು ನರ್ಸರಿಗಳು ಕಾರ್ಯನಿರ್ವಹಿಸುತ್ತಿದ್ದವು. ನರ್ಸರಿ ಜಮೀನನ್ನು ಕೈಬಿಟ್ಟು, ಉಳಿದ ಜಮೀನು ಹಾಗೂ ಆಕ್ಷೇಪಾರ್ಹವಾದ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ನರ್ಸರಿ ಇದ್ದ ಜಮೀನು ಮತ್ತು ಸಾರ್ವಜನಿಕ ಉದ್ಯಾನಕ್ಕೆ ಮೀಸಲಾಗಿದ್ದ 2 ಎಕರೆ 39.5 ಗುಂಟೆ (1,30,680 ಚದರ ಅಡಿ) ಜಮೀನನ್ನು ಬಿಲ್ಡರ್ ಅಶೋಕ್ ಧಾರಿವಾಲ್ ಅವರಿಗೆ ಅಕ್ರಮವಾಗಿ 2014ರ ನವೆಂಬರ್ 18ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಡಿನೋಟಿಫೈ ಮಾಡಿಕೊಟ್ಟಿದ್ದಾರೆ ಎಂದು ದೂರಲಾಗಿದೆ.
ಹಿಂದಿನ ಅಧಿಸೂಚನೆಯನ್ನು ರದ್ದುಪಡಿಸಿ, ರಿ ಡೂ ಹೆಸರಿನಲ್ಲಿ ಆಕ್ಷೇಪಿತ ಸರ್ಕಾರಿ ಸ್ವತ್ತಿಗೆ ಭೂಮಿ ಬಳಕೆ ಬದಲಾವಣೆ ಮಾಡಿಕೊಡಲಾಗಿದೆ. ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಭೂಮಿಯನ್ನು ರಿ ಡೂ ಹೆಸರಿನಲ್ಲಿ ಡಿನೋಟಿಫೈ ಮಾಡಿರುವ ಸಿದ್ದರಾಮಯ್ಯ, ಶ್ಯಾಮ್ ಭಟ್, ಅಶೋಕ್ ಧಾರಿವಾಲ್ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಮತ್ತು ಸರ್ಕಾರಿ ಭೂಮಿ ಕಬಳಿಕೆ ಸಂಚಿನ ಆರೋಪದ ಅಡಿ ಪ್ರಕರಣದ ದಾಖಲಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.