ಬಿಬಿಎಂಪಿ ಕ್ಷೇತ್ರ ಪುನರ್‌ ವಿಂಗಡಣೆ ತಾರತಮ್ಯ: ಚುನಾವಣೆ ನಡೆಸದಂತೆ ಆಯೋಗಕ್ಕೆ ನಿರ್ದೇಶಿಸಲು ಹೈಕೋರ್ಟ್‌ಗೆ ಕೋರಿಕೆ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 29 ಸಾವಿರ ಜನಸಂಖ್ಯೆ ನಿಗದಿಪಡಿಸಿ, ಹಿಂದೆ ಇದ್ದ ಏಳು ವಾರ್ಡ್‌ಗಳ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಕೆ ಆರ್ ಮಾರ್ಕೆಟ್ ವಾರ್ಡ್ ಕೈಬಿಡಲಾಗಿದೆ ಎಂದು ಆಕ್ಷೇಪ.
BBMP and Karnataka HC
BBMP and Karnataka HC

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳ ರಚನೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರಿನ ವಕೀಲ ಎಸ್ ಇಸ್ಮಾಯಿಲ್ ಜಬಿವುಲ್ಲಾ ಅವರು ಅರ್ಜಿ ಸಲ್ಲಿಸಿದ್ದು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಸೀಮಾ ನಿರ್ಣಯ ಆಯೋಗದ ಅಧ್ಯಕ್ಷರು, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ವಾರ್ಡ್‌ಗಳ ಕರಡು ಪುನರ್‌ವಿಂಗಡಣೆಯನ್ನು 2022ರ ಜೂನ್‌ 23ರಂದು ಪ್ರಕಟಿಸಲಾಗಿತ್ತು. ಇದನ್ನು ಆಕ್ಷೇಪಿಸಿ ಅರ್ಜಿದಾರರು ಜುಲೈ 7ರಂದು ಮನವಿ ಸಲ್ಲಿಸಿದ್ದರು. ಸರ್ಕಾರ ಮನವಿಯನ್ನು ಪರಿಗಣಿಸಿರಲಿಲ್ಲ. ಹೀಗಾಗಿ, ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ವಿವಾದವನ್ನು ಹೈಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಆ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ರಚನೆಯಲ್ಲಿ ತಾರತಮ್ಯ ಮಾಡಲಾಗಿದೆ. ಗೋವಿಂದರಾಜ ನಗರ, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಿದ್ದಲ್ಲದೇ, ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಪ್ರತಿ ವಾರ್ಡ್‌ಗೆ ಸರಾಸರಿ 29 ಸಾವಿರ ಜನಸಂಖ್ಯೆ ನಿಗದಿಪಡಿಸಿ, ಹಿಂದೆ ಇದ್ದ ಏಳು ವಾರ್ಡ್‌ಗಳ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಪ್ರಸಿದ್ದ ಕೆ ಆರ್ ಮಾರ್ಕೆಟ್ ವಾರ್ಡ್ ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Also Read
[ಬಿಬಿಎಂಪಿ ಚುನಾವಣೆ] ವಾರದೊಳಗೆ ವಾರ್ಡ್‌ವಾರು ಮೀಸಲಾತಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳನ್ನು ರಚಿಸಿ 2022ರ ಜುಲೈ 14ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಹೊಸದಾಗಿ ವಾರ್ಡ್‌ಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಐತಿಹಾಸಿಕ ಕೆ ಆರ್ ಮಾರ್ಕೆಟ್ ವಾರ್ಡ್ ಮರು ರಚಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವ ತನಕ ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com