ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸಿಗೆ ಹಾನಿ ಮಾಡುವ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಪೋಸ್ಟ್‌ಕಾರ್ಡ್ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ ಮತ್ತು ವಸಂತ್ ಗಿಳಿಯಾರ್ ಎಂಬವರನ್ನು ಮುಂದಿನ ವಿಚಾರಣೆಯವರೆಗೆ ಬಂಧಿಸದಂತೆ ಗುರುವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮಹೇಶ್ ವಿಕ್ರಮ್ ಹೆಗ್ಡೆ ಮತ್ತು ವಸಂತ್ ಗಿಳಿಯಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಷಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ, ಅರ್ಜಿಯ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಲಾಗಿದೆ. ತುರ್ತು ಅಗತ್ಯ ಮತ್ತು ಅಪರಾಧದ ಸ್ವರೂಪ ಪರಿಗಣಿಸಿ ಅರ್ಜಿದಾರರನ್ನು ಮುಂದಿನ ವಿಚಾರಣೆಯವರೆಗೆ ಬಂಧಿಸಬಾರದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಸಾಮಾಜಿಕ ಕಾರ್ಯಕರ್ತ ಹರೀಶ್ ನಾಗರಾಜು ಕಳೆದ ಏಪ್ರಿಲ್ 9ರಂದು ಮಹೇಶ್ ವಿಕ್ರಮ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳ ಮೂಲಕ ತಪ್ಪಾದ ಫೋಟೊ ಮತ್ತು ಸತ್ಯಕ್ಕೆ ದೂರವಾದ ಅಂಶಗಳನ್ನು ಒಳಗೊಂಡ ನಕಲಿ ನ್ಯೂಸ್ ಕ್ಲಿಪ್ ಸಿದ್ಧಪಡಿಸಿ, ಜನರನ್ನು ಪ್ರಚೋದಿಸುವ ಉದ್ದೇಶದಿಂದ ಅದನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಫೋಟೊ ದುರ್ಬಳಕೆ ಮಾಡಿಕೊಂಡದ್ದಲ್ಲದೇ ಅದನ್ನು ಕೆಟ್ಟ ಮಾಹಿತಿಯೊಂದಿಗೆ ಬಳಕೆ ಮಾಡುವ ಮೂಲಕ ಅವರ ವರ್ಚಸ್ಸಿಗೆ ಹಾನಿ ಮಾಡಲಾಗಿದೆ ಎಂದು ಏಳು ಮಂದಿಯ ವಿರುದ್ಧ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120-ಬಿ,153-ಎ, 419, 468, 469, 471, 505(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66,66-ಸಿ,66-ಡಿ ಅಡಿ ಪ್ರಕರಣ ದಾಖಲಿಸಿದ್ದಾರೆ.