ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ: ಶಾಸಕ ಪ್ರಿಯಾಂಕ್‌ ಖರ್ಗೆಗೆ ಸಮನ್ಸ್‌ ಜಾರಿ ಮಾಡಿದ ಹೈಕೋರ್ಟ್‌

ಕಾಂಗ್ರೆಸ್‌ನಿಂದ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಪ್ರಿಯಾಂಕ್ ಖರ್ಗೆ ಮತದಾರರಿಗೆ ಆಮಿಷ ಒಡ್ಡಿದ್ದು, ಇದು ಲಂಚ ಹಾಗೂ ಭ್ರಷ್ಟಾಚಾರಕ್ಕೆ ಸಮವಾಗಿದೆ ಎಂದು ಆಕ್ಷೇಪಿಸಲಾಗಿದೆ.
Priyank Kharge and Karnataka HC
Priyank Kharge and Karnataka HC
Published on

ಸುಳ್ಳು ಜಾತಿ ಪ್ರಮಾಣ ಪತ್ರ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಲ್ಲದೇ, ಉಚಿತ ಗ್ಯಾರಂಟಿಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಆರೋಪದ ಹಿನ್ನೆಲೆಯಲ್ಲಿ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಪ್ರಿಯಾಂಕ್ ಖರ್ಗೆ ಅವರಿಗೆ ಕರ್ನಾಟಕ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.

ಪ್ರಿಯಾಂಕ್ ಖರ್ಗೆಯವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ನಿವಾಸಿ ಅಶ್ವತ್ಥರಾಮ ರಾಠೋಡ್ ಸಲ್ಲಿಸಿರುವ ಚುನಾವಣಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜಿ ಉಮಾ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ಸಂಬಂಧ ಸೆಪ್ಟೆಂಬರ್‌ 5ಕ್ಕೆ ವಿಚಾರಣೆಗೆ ಹಾಜರಾಗುವಂತೆ ಪ್ರಿಯಾಂಕ್ ಖರ್ಗೆ ಅವರಿಗೆ ಸಮನ್ಸ್ ಜಾರಿಗೊಳಿಸಿತು. ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಿಯಾಂಕ್ ಖರ್ಗೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬದಲು ಗ್ರಾಮ ಪಂಚಾಯಿತಿ ಚುನಾವಣೆಗೆ ಸಲ್ಲಿಸಲಾಗುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದೂ ಸಹ 2021ರ ಪ್ರಮಾಣ ಪತ್ರವಾಗಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆಯೂ ಅಸಮರ್ಪಕ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದಲ್ಲದೆ, ಕಾಂಗ್ರೆಸ್‌ನಿಂದ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಪ್ರಿಯಾಂಕ್ ಖರ್ಗೆ ಮತದಾರರಿಗೆ ಆಮಿಷ ಒಡ್ಡಿದ್ದು, ಇದು ಲಂಚ ಹಾಗೂ ಭ್ರಷ್ಟಾಚಾರಕ್ಕೆ ಸಮವಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123 (1) ಪ್ರಕಾರ ಮತ್ತು ಸೆಕ್ಷನ್ 123 (2) ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವುದೂ ಅಪರಾಧವಾಗಿದೆ. ಗ್ಯಾರಂಟಿ ಯೋಜನೆಗಳು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರನ್ನು ಪ್ರೇರೇಪಿಸಿದೆ. ಮತದಾರರಿಗೆ ಆಮಿಷವೊಡ್ಡುವುದು ಪ್ರಜಾಪ್ರತಿನಿಧಿ ಕಾಯಿದೆಯ ಅನ್ವಯ ಅಪರಾಧ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Kannada Bar & Bench
kannada.barandbench.com