ತನಿಖಾಧಿಕಾರಿಯಿಂದ ಕಿರುಕುಳ ಆರೋಪ: ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಐಶ್ವರ್ಯಾ ಗೌಡ

ಸ್ನೇಹಿತರು ಮತ್ತು ಸಂಬಂಧಿಗಳಿಂದ ಪಡೆದಿರುವ ಅಂದಾಜು ₹10 ಕೋಟಿಗೂ ಹೆಚ್ಚಿನ ಮೊತ್ತವನ್ನು ವಾಪಸು ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಕೆ ಎನ್‌ ಹರೀಶ್‌ ವಿರುದ್ಧ ಏಳು ಪ್ರಕರಣ ದಾಖಲಾಗಿವೆ.
Justice S R Krishna Kumar and Karnataka HC
Justice S R Krishna Kumar and Karnataka HC
Published on

“ಮುಟ್ಟಿನ ದಿನಗಳು ನಡೆಯುತ್ತಿದ್ದು, ಕಾಲುಗಳು ಊದಿಕೊಂಡಿವೆ. ಹೆಜ್ಜೆ ಎತ್ತಿಡಲೂ ಆಗುತ್ತಿಲ್ಲ. ಕಿರುಗಾವಲಿನ (ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು) ಸ್ಥಿರಾಸ್ತಿಯ ಮಹಜರು ಪ್ರಕ್ರಿಯೆಗೆ ನಂತರ ಹಾಜರಾಗುತ್ತೇನೆ ಎಂದರೂ ಕೇಳಲಿಲ್ಲ. ಬರದೇ ಹೋದಲ್ಲಿ ಆ್ಯಂಬುಲೆನ್ಸ್ ತಂದು ಎತ್ತಿಹಾಕಿಕೊಂಡು ಹೋಗುತ್ತೇನೆ ಎಂದು ತನಿಖಾಧಿಕಾರಿ ಎಸಿಪಿ ಭರತ್ ಎಸ್‌.ರೆಡ್ಡಿ ಬೆದರಿಕೆ ಹಾಕಿದರು" ಎಂದು ಆರೋಪಿ ಐಶ್ವರ್ಯಾ ಗೌಡ ಅಲಿಯಾಸ್‌ ನವ್ಯಶ್ರೀ ಕರ್ನಾಟಕ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ತನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಕೋರಿ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಕೆ ಎನ್‌ ಹರೀಶ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಮಾಣ ಪತ್ರಕ್ಕೆ ಪ್ರತಿ ಉತ್ತರ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿರುವ ಪೀಠವು ವಿಚಾರಣೆಯನ್ನು ಮುಂದೂಡಿದೆ. 

ಐಶ್ವರ್ಯಾ ಗೌಡ ಆರೋಪಿಯಾಗಿರುವ ಪ್ರಕರಣಗಳ ತನಿಖಾಧಿಕಾರಿಯಾದ (ಐಒ) ಬ್ಯಾಟರಾಯನಪುರದ ಎಸಿಪಿ ಭರತ್ ಎಸ್‌.ರೆಡ್ಡಿ ಅವರು ತನಿಖೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಎಂದು ಆಕೆಯ ಪರವಾಗಿ ವಕೀಲ ಎಸ್‌ ಸುನಿಲ್‌ ಕುಮಾರ್ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ.

ದೂರುದಾರೆ ಶಿಲ್ಪಾ ಗೌಡ ಅವರ ನಿಕಟವರ್ತಿಯೂ ಆಗಿರುವ ಭರತ್‌ ಎಸ್‌.ರೆಡ್ಡಿ ಅವರು ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಹೊಲಸು ಭಾಷೆ ಬಳಸಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಕಾನೂನಿಗೆ ವಿರುದ್ಧವಾಗಿ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲಿ ಅವಮಾನ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ನಮ್ಮ ಹೇಳಿಕೆ ದಾಖಲಿಸಿಕೊಳ್ಳದೆ ಅವರು ಬರೆದುಕೊಂಡು ಬಂದಿದ್ದ ಹೇಳಿಕೆಗೆ ನಮ್ಮ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಐಶ್ವರ್ಯಾ ಆಕ್ಷೇಪಿಸಿದ್ದಾರೆ.

ವಂಚಿಸಿ ಪಡೆದಿರುವ ಹಣದಲ್ಲಿ ಕಿರುಗಾವಲಿನಲ್ಲಿ ನಾಲ್ಕು ಗುಂಟೆ ಜಮೀನು ಖರಿದೀಸಿದ್ದೀರಿ. ಅದನ್ನು ಮಹಜರು ಮಾಡಬೇಕು ಬನ್ನಿ ಎಂದು ಸತತವಾಗಿ ಕಿರುಕುಳ ನೀಡಿದ್ದಾರೆ. ನಾನು ಮುಟ್ಟಿನ ಸಮಯದಲ್ಲಿದ್ದೇನೆ. ಐದು ದಿನಬಿಟ್ಟು ತನಿಖೆಗೆ ಹಾಜರಾಗುತ್ತೇನೆ ಎಂದರೂ ಕೇಳಲಿಲ್ಲ. ನೀವು ಪೊಲೀಸ್‌ ಠಾಣೆಗೆ ಬರದೇ ಹೋದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

Also Read
ಮಾಜಿ ಸಂಸದ ಡಿ ಕೆ ಸುರೇಶ್‌ ಹೆಸರಿನಲ್ಲಿ ಮತ್ತೊಂದು ವಂಚನೆ ಪ್ರಕರಣ: ಐಶ್ವರ್ಯಾ ಬಿಡುಗಡೆಗೆ ಆದೇಶಿಸಿದ ಹೈಕೋರ್ಟ್‌

ಚಂದ್ರಾ ಲೇಔಟ್‌ ಠಾಣೆಯ ಪೊಲೀಸರು ನಮ್ಮ ಮನೆಗೆ ಬಂದು ನಮ್ಮನ್ನು ಬೆಳಗಿನಿಂದ ಸಂಜೆಯವರೆಗೆ ಒಂದೇ ಕಡೆ ಕುಳ್ಳಿರಿಸಿ ತೊಂದರೆ ನೀಡಿದ್ದಾರೆ. ತನಿಖೆಗೆ ಸಹಕರಿಸುತ್ತೇವೆ ಎಂದರೂ ನಮ್ಮ ಮಾತು ಕೇಳಿಲ್ಲ. ಪೊಲೀಸ್ ಕಸ್ಟಡಿ ವೇಳೆ ನಮ್ಮ ಮೊಬೈಲ್‌ ಫೋನುಗಳನ್ನು ಕಸಿದುಕೊಳ್ಳಲಾಗಿದೆ. ಬಲವಂತದಿಂದ ಪಾಸ್‌ವರ್ಡ್‌ಗಳನ್ನು ಪಡೆದು ವೈಯಕ್ತಿಕ ವಿವರಗಳನ್ನು ಜಾಲಾಡಲಾಗಿದೆ. ವಿಚಾರಣೆ ವೇಳೆ ನನ್ನ ಸತ್ಯನಿಷ್ಠತೆ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ನೇಹಿತರು ಮತ್ತು ಸಂಬಂಧಿಗಳಿಂದ ಪಡೆದಿರುವ ಅಂದಾಜು ₹10 ಕೋಟಿಗೂ ಹೆಚ್ಚಿನ ಮೊತ್ತವನ್ನು ವಾಪಸು ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಕೆ ಎನ್‌ ಹರೀಶ್‌ ವಿರುದ್ಧ ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ಚಂದ್ರಾ ಲೇಔಟ್‌, ಮಂಡ್ಯ, ವಿಜಯನಗರ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಂಚನೆ ಹಾಗೂ ಅಪರಾಧಿಕ ಕೃತ್ಯ ಎಸಗಿದ ಆರೋಪದಡಿ ಒಟ್ಟು ಏಳು ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. ಈ ಎಲ್ಲ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಐಶ್ವರ್ಯಾ ಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com