ಮುಂಬೈನ ಸಂತಾಕ್ರೂಜ್‌ನ ಸಹಾರಾ ಸ್ಟಾರ್ ಹೋಟೆಲ್ ಹೊರಗಡೆ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತರ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಶಾಲಿಯಾಗಿರುವ ಸಪ್ನಾ ಗಿಲ್ ಅವರನ್ನು ಮುಂಬೈ ನ್ಯಾಯಾಲಯವು ಶುಕ್ರವಾರ ಪೊಲೀಸ್ ಕಸ್ಟಡಿಗೆ ನೀಡಿದೆ.
ಗಿಲ್ ಮತ್ತು ಸಹ ಆರೋಪಿ ಶೋಬಿತ್ ಠಾಕೂರ್ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು. ಅಂಧೇರಿ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಗಳನ್ನು ಶನಿವಾರ ಹಾಜರುಪಡಿಸಲಾಗಿ, ನ್ಯಾಯಾಲಯವು ಅವರನ್ನು ಫೆಬ್ರವರಿ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತು.
ಶಾ ಮೇಲಿನ ದಾಳಿ ಮತ್ತು ಅವರ ಕಾರಿನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಶಿವಾರ ಪೊಲೀಸರು ಐವರನ್ನು ಶುಕ್ರವಾರ ಬಂಧಿಸಿದ್ದರು.
ಸಹಾರಾ ಸ್ಟಾರ್ ಕೆಫೆಯಲ್ಲಿ ಬುಧವಾರ ಶಾ ಮತ್ತು ಅವರ ಗೆಳೆಯರು ಊಟ ಮಾಡುತ್ತಿದ್ದಾಗ ಬಂದ ಗಿಲ್ ಮತ್ತು ಠಾಕೂರ್ ಅವರ ಜೊತೆ ಕೆಲವು ಸೆಲ್ಫಿಗಳನ್ನು ತೆಗೆದುಕೊಂಡರು. ಆನಂತರ ಮತ್ತಷ್ಟು ಹೆಚ್ಚಿನ ಫೋಟೊಗಳಿಗಾಗಿ ಪೀಡಿಸಿದರು. ಯಾವಾಗ ಶಾ ಫೋಟೊ ತೆಗೆಸಿಕೊಳ್ಳಲು ನಿರಾಕರಿಸಿದರೋ ಆಗ ಅವರು ಶಾ ವಿರುದ್ಧ ದುರ್ವರ್ತನೆ ತೋರತೊಡಗಿದರು. ಹೊಟೆಲ್ ಸಿಬ್ಬಂದಿ ಈ ವೇಳೆ ಮಧ್ಯಪ್ರವೇಶಿಸಿ ಗಿಲ್ ಮತ್ತು ಠಾಕೂರ್ ಅವರನ್ನು ಹೊರಗೆ ಕಳುಹಿಸಿದರು. ಆದರೆ, ಬೆಳಗಿನ ಜಾವ 4 ಗಂಟೆ ವೇಳೆಗೆ ಶಾ ಮತ್ತು ಗೆಳೆಯರು ಹೋಟೆಲ್‌ನಿಂದ ಹೊರಡುತ್ತಿದ್ದಾಗ ಗಿಲ್ ಮತ್ತು ಇತರರು ಮೋಟಾರ್ ಸೈಕಲ್‌ಗಳಲ್ಲಿ ಮತ್ತು ಕಾರ್‌ನಲ್ಲಿ ಬಂದು ಶಾ ಮತ್ತು ಗೆಳೆಯರನ್ನು ನಿಂದಿಸಿ, ಹಲ್ಲೆಗೈದರು. ಸಹ ಆರೋಪಿ ಶೋಬಿತ್ ಠಾಕೂರ್ ಬ್ಯಾಟ್ ಬೀಸುವ ಮೂಲಕ ಕಾರಿನ ಹಿಂದಿನ ಗಾಜನ್ನು ಪುಡಿಪುಡಿ ಮಾಡಿದರು. ಆನಂತರ ಶಾಗೆ ಬೆದರಿಕೆ ಹಾಕಿದ ಗಿಲ್ ಅವರು ₹50 ಸಾವಿರ ಪರಿಹಾರಕ್ಕೂ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಗಲಭೆ, ಸುಲಿಗೆ, ಕ್ರಿಮಿನಲ್ ಬೆದರಿಕೆ ಆರೋಪದಡಿ ಗಿಲ್, ಠಾಕೂರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ ಇರಿಸಿದ ಕಾರಣಕ್ಕೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 387ಅನ್ನು ಸಹ ದಾಖಲಿಸಲಾಗಿದೆ.