ಪತ್ನಿಯ ಮೇಲೆ ಕ್ರೌರ್ಯದ ಆರೋಪ: ಮಲೇಶಿಯಾದಿಂದ ನಿರೀಕ್ಷಣಾ ಜಾಮೀನು ಕೋರಿದ ಪತಿಗೆ ಹೈಕೋರ್ಟ್‌ ಅಸ್ತು

ಕ್ರೌರ್ಯ, ಜೀವ ಬೆದರಿಕೆ, ಅಕ್ರಮವಾಗಿ ಕೂಡಿಹಾಕಿರುವುದು, ವಂಚನೆ ಮತ್ತು ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
Karnataka High Court
Karnataka High Court

ಮಲೇಶಿಯಾಗೆ ತೆರಳಿದ ನಂತರ ಭಾರತಕ್ಕೆ ವಾಪಸ್ಸಾಗದೆ ಪತ್ನಿ ಮೇಲೆ ಕ್ರೌರ್ಯ ಎಸಗಿದ ಆರೋಪ ಸಂಬಂಧ ಬಂಧನದ ಭೀತಿ ಎದುರಿಸುತ್ತಿರುವ ದಂತ ವೈದ್ಯರೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರೀಕ್ಷಣಾ ಜಾಮೀನು ನೀಡಿದೆ.

ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ಆರೋಪ ಕುರಿತು ಪತ್ನಿ ದಾಖಲಿಸಿದ್ದ ದೂರಿನ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಲೇಶಿಯಾದಲ್ಲಿ ದಂತ ವೈದ್ಯರಾಗಿ ಕೆಲಸ ಮಾಡುತ್ತಿರುವ ತುಮಕೂರಿನ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರು ಮಲೇಶಿಯಾದಲ್ಲಿ ದಂತ ವೈದ್ಯರಾಗಿದ್ದು, ಆಗಾಗ್ಗೆ ಭಾರತಕ್ಕೆ ಬಂದು ಪತ್ನಿಯೊಂದಿಗೆ ಉಳಿದಿದ್ದಾರೆ ಎಂಬುದು ದಾಖಲೆಯಿಂದ ತಿಳಿಯುತ್ತದೆ. ಆತನಿಗೆ ಜಾಮೀನು ನೀಡುವುದಕ್ಕೆ ಪ್ರಕರಣದಲ್ಲಿ ಆರೋಪಗಳು ಅಡ್ಡಿಯಾಗುವುದಿಲ್ಲ. ಮರಣದ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿರುವ ಆರೋಪಗಳು ಅರ್ಜಿದಾರರ ಮೇಲಿಲ್ಲ. ಜಾಮೀನು ನೀಡಿದರೆ ಅರ್ಜಿದಾರ ತಲೆಮರೆಸಿಕೊಳ್ಳಬಹುದು, ಸಾಕ್ಷ್ಯ ತಿರುಚಬಹುದು ಅಥವಾ ಸಾಕ್ಷಿಗಳನ್ನು ಬೆದರಿಸಬಹುದು ಎಂಬ ತನಿಖಾಧಿಕಾರಿಯ ಆತಂಕ ದೂರಮಾಡಲು ಷರತ್ತುಗಳನ್ನು ವಿಧಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠವು ಅರ್ಜಿದಾರ ವೈದ್ಯನಿಗೆ ನಿರೀಕ್ಷಣಾ ಜಾಮೀನು ನೀಡಿದೆ.

ತೀರ್ಪಿನ ಪ್ರತಿ ಲಭ್ಯವಾದ ಒಂದು ತಿಂಗಳಲ್ಲಿ ತನಿಖಾಧಿಕಾರಿ ಮುಂದೆ ಅರ್ಜಿದಾರ ಹಾಜರಾಗಬೇಕು. ಎರಡು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ತನಿಖಾಧಿಕಾರಿ ಸೂಚಿಸಿದಾಗ ಅವರ ಮುಂದೆ ಹಾಜರಾಗಬೇಕು. ಪ್ರಕರಣದಲ್ಲಿ ಸಾಕ್ಷ್ಯ ತಿರುಚಲು ಅಥವಾ ಸಾಕ್ಷಿಗಳನ್ನು ಬೆದರಿಸಲು ಯತ್ನಿಸಬಾರದು ಎಂದು ಪೀಠ ಅರ್ಜಿದಾರನಿಗೆ ಷರತ್ತು ವಿಧಿಸಿದೆ.

ಇದೇ ವೇಳೆ ನ್ಯಾಯಾಲಯ ವಿಧಿಸಿರುವ ಯಾವುದೇ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದತಿಗೆ ನ್ಯಾಯಾಲಯವನ್ನು ತನಿಖಾಧಿಕಾರಿ ಕೋರಲು ಮುಕ್ತವಾಗಿರುತ್ತಾರೆ ಎಂದು ಆದೇಶದಲ್ಲಿ ಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರ ಮತ್ತು ದೂರುದಾರ ಮಹಿಳೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅರ್ಜಿದಾರ ದಂತ ವೈದ್ಯನಾಗಿದ್ದು, ಉದ್ಯೋಗದ ನಿಮಿತ್ತ ಮಲೇಶಿಯಾಗೆ ತೆರಳಿದ್ದರು. ಒಂದು ವರ್ಷದ ನಂತರ ಮಲೇಶಿಯಾಗೆ ಪತ್ನಿಯನ್ನು ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ಮಲೇಶಿಯಾಗೆ ತೆರಳುವಾಗ ಪತ್ನಿಯ ತಂದೆಯಿಂದ ಐದು ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರು. ಆದರೆ, ಮಲೇಶಿಯಾಗೆ ಹೋದ ನಂತರ ಮತ್ತೆ ಭಾರತಕ್ಕೆ ಹಿಂದಿರುಗಲಿಲ್ಲ. ಪತ್ನಿಗೆ ಕರೆ ಮಾಡಲಿಲ್ಲ. ಆಕೆಯನ್ನೂ ಮಲೇಶಿಯಾಗೆ ಕರೆದೊಯ್ಯಲಿಲ್ಲ. ಸದ್ಯ ಆತ ಎಲ್ಲಿದ್ದಾನೆ ಎನ್ನುವುದೇ ತಿಳಿದಿಲ್ಲ ಎಂಬ ಆರೋಪ ಅರ್ಜಿದಾರರ ಮೇಲಿದೆ.

ಇದೇ ವಿಚಾರವಾಗಿ ಕ್ರೌರ್ಯ, ಜೀವ ಬೆದರಿಕೆ, ಅಕ್ರಮವಾಗಿ ಕೂಡಿಹಾಕಿರುವುದು, ವಂಚನೆ ಮತ್ತು ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಮಾಡಿ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ತುಮಕೂರಿನ ಮಹಿಳಾ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಬಂಧನ ಭೀತಿಯಿಂದ ಅರ್ಜಿದಾರರು ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com