ನಕಲಿ ದಾಖಲೆ ಸೃಷ್ಟಿಸಿ ಪ್ರಯಾಣ, ದಿನಭತ್ಯೆ ಪಡೆದ ಆರೋಪ: ಎನ್‌ಐಟಿಕೆ ಪ್ರಾಧ್ಯಾಪಕರ ವಿರುದ್ಧದ ಪ್ರಕರಣ ರದ್ದತಿಗೆ ನಕಾರ

“ಅರ್ಜಿದಾರರು ಪ್ರಮುಖವಾದ ಸಂಸ್ಥೆಯಲ್ಲಿ ಅತ್ಯುನ್ನತ ಶ್ರೇಣಿಯ ಪ್ರೊಫೆಸರ್‌ ಆಗಿರಬಹುದು. ಮಹತ್ವದ ಸ್ಥಾನದಲ್ಲಿರುವವರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು” ಎಂದಿರುವ ನ್ಯಾಯಾಲಯ.
Karnataka High Court
Karnataka High Court
Published on: 

ಬೆಂಗಳೂರು ಮತ್ತು ಚೆನ್ನೈನಲ್ಲಿ ಎನ್‌ಸಿಸಿ ಶಿಬಿರಗಳಲ್ಲಿ ಪಾಲ್ಗೊಂಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಮಂಗಳೂರಿನ ಸುರತ್ಕಲ್‌ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ (ಎನ್‌ಐಟಿಕೆ) ₹1,18,593 ಅಕ್ರಮವಾಗಿ ಕ್ಲೇಮು ಪಡೆದಿರುವ ಸಂಬಂಧ ಸಂಸ್ಥೆಯ ಪ್ರಾಧ್ಯಾಪಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಕ್ರಿಮಿನಲ್‌ ಪ್ರಕರಣ ವಜಾಗೊಳಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.

ಎನ್‌ಐಟಿಕೆ ಸುರತ್ಕಲ್‌ನ ಆರ್ಮಿ ವಿಂಗ್‌ನ ಅಸೋಸಿಯೇಟ್‌ ಎನ್‌ಸಿಸಿ ಆಫೀಸರ್‌ ಡಾ. ಎಚ್‌ ಶಿವಾನಂದ ನಾಯಕ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice Anant Ramanath Hegde
Justice Anant Ramanath Hegde

“ಅರ್ಜಿದಾರರು ಪ್ರಮುಖವಾದ ಸಂಸ್ಥೆಯಲ್ಲಿ ಅತ್ಯುನ್ನತ ಶ್ರೇಣಿಯ ಪ್ರೊಫೆಸರ್‌ ಆಗಿರಬಹುದು. ಮಹತ್ವದ ಸ್ಥಾನದಲ್ಲಿರುವವರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅರ್ಜಿದಾರರು ನಾಲ್ಕನೇ ಗ್ರೇಡ್‌ ಗುಮಾಸ್ತನಾಗಿದ್ದರೆ ಅದನ್ನು ಬೇರೆಯದೇ ರೀತಿಯಲ್ಲಿ ನೋಡಬಹುದಿತ್ತು. ಆದರೆ, ಅತ್ಯುನ್ನತ ಸ್ಥಾನದಲ್ಲಿರುವ ಅರ್ಹತೆ ಹೊಂದಿರುವ ವ್ಯಕ್ತಿಯಾಗಿರುವ ಅವರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು” ಎಂದು ಪೀಠ ಹೇಳಿದೆ.

“ದೂರು ದಾಖಲಾದ ಮೇಲೆ ಹಣ ಹಿಂದಿರುಗಿಸಲು ಮುಂದಾಗಿದ್ದೀರಿ. ನಾನು ಜಾಸ್ತಿ ಮಾತನಾಡಿದಷ್ಟು ಅರ್ಜಿದಾರರಿಗೆ ಸಮಸ್ಯೆಯಾಗಲಿದೆ” ಎಂದೂ ಪೀಠ ಹೇಳಿತು.

ಅರ್ಜಿದಾರರ ಪರ ವಕೀಲರು “ಹಣವು ಶಿವಾನಂದ ಅವರ ಖಾತೆಗೆ ಬಂದಿದ್ದು, ಅವರಿಗೆ ತಿಳಿದಿರಲಿಲ್ಲ. ಈಗ ಹಣ ಹಿಂದಿರುಗಿಸಲು ಸಿದ್ಧರಿದ್ದಾರೆ” ಎಂದರು. ಆದರೆ, ಪೀಠಕ್ಕೆ ಇದಕ್ಕೆ ಒಪ್ಪಲಿಲ್ಲ.

ಪ್ರಕರಣದ ಹಿನ್ನೆಲೆ: 2023ರ ಮೇ 5ರಿಂದ 2026ರ ಮೇ 16ರ ನಡುವೆ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎನ್‌ಸಿಸಿ ಶಿಬಿರಗಳು ನಡೆದಿವೆ ಎಂದು ಟು ಕಾರ್‌ ಎಂಜಿನಿಯರ್‌ ಕಾಪಿ ಎನ್‌ಸಿಸಿ (ಆರ್ಮಿ ವಿಂಗ್)‌ ಘಟಕದ ಸಹಕಾಯ ಎನ್‌ಸಿಸಿ ಆಫೀಸರ್‌ಗಳಾಗಿರುವ ಡಾ. ಪಿ ಸ್ಯಾಮ್‌ ಜಾನ್ಸನ್‌ ಮತ್ತು ಡಾ. ಎಚ್‌ ಶಿವಾನಂದ ನಾಯಕ್‌ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳ ಆಧಾರದಲ್ಲಿ ಟಿಎ/ಡಿಎ, ವಸತಿ ಹಾಗೂ ಪ್ರಯಾಣ ವೆಚ್ಚಗಳ ಮರುಪಾವತಿ ಪಡೆದಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಆನಂತರ 2025ರ ಜೂನ್‌ 28ರಿಂದ ಜುಲೈ 7ರವರೆಗೆ ಬೆಂಗಳೂರಿನಲ್ಲಿ ನಡೆದಿತ್ತು ಎಂದು ತೋರಿಸಲಾದ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದಾಗಿ ತೋರಿಸಿ ಇಬ್ಬರೂ ₹1,18,593 ಗಳನ್ನು ಟಿಎ/ಡಿಎ ಮತ್ತು ವಸತಿ ವೆಚ್ಚದ ರೂಪದಲ್ಲಿ ಪಡೆದಿದ್ದರು. ಇನ್ನು ಎನ್‌ಸಿಸಿ ಚಟುವಟಿಕೆಗಳಿಗೆ ಮೀಸಲಾದ ₹12,32,862 ಅನ್ನು ಸ್ಯಾಮ್‌ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸುರತ್ಕಲ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.