[ಮುಡಾ ಪ್ರಕರಣ] ಭೂ ಮಾಲೀಕ ದೇವರಾಜುರಿಂದ ಹೈಕೋರ್ಟ್‌ನಲ್ಲಿ ಎರಡು ಮೇಲ್ಮನವಿ; ನ. 23ಕ್ಕೆ ವಿಚಾರಣೆ

ಸಶಕ್ತ ರಾಜಕಾರಣಿಗಳ ರಾಜಕೀಯ ಕೆಸರೆರಚಾಟದಲ್ಲಿ ನಮ್ಮನ್ನು ಸಿಲುಕಿಸಲಾಗಿದೆ. ಏಕಸದಸ್ಯ ಪೀಠದ ಆದೇಶದಿಂದ ನಾನು ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ಎದುರಿಸಬೇಕಿದೆ ಎಂದು ಅಳಲು ತೋಡಿಕೊಂಡಿರುವ ದೇವರಾಜು.
CM Siddaramaiah
CM Siddaramaiah
Published on

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿಸಿದ್ದ ರಾಜ್ಯಪಾಲರ ಆದೇಶ ಎತ್ತಿ ಹಿಡಿಯುವಾಗ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಕಟು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣ ಎದುರಿಸುವಂತೆ ಮಾಡಿರುವ ಆದೇಶ ಬದಿಗೆ ಸರಿಸಲು ಕೋರಿ ಸಿಎಂ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಾಟ ಮಾಡಿದ್ದ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ವಿಭಾಗೀಯ ಪೀಠವು ನವೆಂಬರ್‌ 23ಕ್ಕೆ ವಿಚಾರಣೆ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠದ ಮುಂದೆ ಎರಡು ಮೇಲ್ಮನವಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಹಿರಿಯ ವಕೀಲ ದುಷ್ಯಂತ್‌ ದವೆ ಕೋರಿದರು.

ನ್ಯಾಯಮೂರ್ತಿಗಳು ಹಾಜರಾಗುತ್ತಿದಂತೆ ದವೆ ಅವರು “25 ವರ್ಷಗಳ ಹಿಂದೆ ನಡೆದಿರುವ ಪ್ರಕರಣದಲ್ಲಿ ನಮ್ಮನ್ನು ಪಕ್ಷಕಾರರನ್ನಾಗಿಸದೇ ಏಕಸದಸ್ಯ ಪೀಠವು ಕಟು ಅಭಿಪ್ರಾಯ ವ್ಯಕ್ತಪಡಿಸಿದೆ. ನಾವು ಸಣ್ಣ ಭೂಮಾಲೀಕರಾಗಿದ್ದು, ಶಕ್ತಿಶಾಲಿ ರಾಜಕಾರಣಿಗಳ ರಾಜಕೀಯ ಕೆಸರೆರಚಾಟದಲ್ಲಿ ನಮ್ಮನ್ನು ಸಿಲುಕಿಸಲಾಗಿದೆ. ಏಕಸದಸ್ಯ ಪೀಠದ ಆದೇಶದಿಂದ ನಾನು ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ಎದುರಿಸಬೇಕಿದೆ. ನಮ್ಮ ಮೇಲ್ಮನವಿಗಳನ್ನು ಶುಕ್ರವಾರ ವಿಚಾರಣೆಗೆ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಕ್ರಿಮಿನಲ್‌ ಮತ್ತು ಸಿವಿಲ್‌ ಹೊಣೆಗಾರಿಕೆ ಎದುರಿಸಬೇಕಾಗುತ್ತದೆ. ವಿಶೇಷವಾಗಿ ನನ್ನ ಮೇಲ್ಮನವಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಪರಿಗಣಿಸಬೇಕು. ನಾನು ಸಾಮಾನ್ಯ ಮನುಷ್ಯನಾಗಿದ್ದು, ಸಕಾರಣವಿಲ್ಲದೇ ಯಾತನೆ ಅನುಭವಿಸುತ್ತಿದ್ದೇನೆ” ಎಂದರು.

ಇದನ್ನು ಆಲಿಸಿದ ಪೀಠವು ನವೆಂಬರ್‌ 23ರಂದು ವಿಚಾರಣೆ ನಡೆಸಲಾಗುವುದು ಎಂದಿತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಅಂದೇ ವಿಭಾಗೀಯ ಪೀಠ ವಿಚಾರಣೆಗೆ ನಿಗದಿಪಡಿಸಿದೆ.

ದೇವರಾಜು ಎರಡು ಮೇಲ್ಮನವಿಗಳನ್ನು ಸಲ್ಲಿಕೆ ಮಾಡಿದ್ದು, ಒಂದರಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ, ಕೇಂದ್ರ ಗೃಹ ಇಲಾಖೆ, ಸಿಬಿಐ, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಮತ್ತಿತರರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ. ಇನ್ನೊಂದು ಮೇಲ್ಮನವಿಯಲ್ಲಿ ದೂರುದಾರರಾದ ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ,‌ ಎಸ್‌ ಪಿ ಪ್ರದೀಪ್‌ ಕುಮಾರ್, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಮತ್ತಿತರರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

Also Read
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಮೇಲ್ಮನವಿಯನ್ನು ನ.23ಕ್ಕೆ ವಿಚಾರಣೆ ನಡೆಸಲಿರುವ ಹೈಕೋರ್ಟ್‌

2004ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ಜೆ ದೇವರಾಜು ಅವರು ಕೆಸರೆ ಗ್ರಾಮದಲ್ಲಿನ 3.14 ಎಕರೆ ಭೂಮಿ ಮಾರಾಟ ಮಾಡಿದ್ದರು. ಮುಡಾ ವಶಪಡಿಸಿಕೊಂಡು ಅಭಿವೃದ್ಧಿಪಡಿಸಿರುವ ಭೂಮಿಯನ್ನು ಹೇಗೆ ಕೃಷಿ ಭೂಮಿ ಎಂದು ದೇವರಾಜು ಮಾರಾಟ ಮಾಡಿದ್ದಾರೆ? 1997ರಲ್ಲೇ ಮುಡಾ ಆಕ್ಷೇಪಾರ್ಹವಾದ ಭೂಮಿಯನ್ನು ಬಡಾವಣೆ ಅಭಿವೃದ್ಧಿಪಡಿಸಲು ವಶಪಡಿಸಿಕೊಂಡಿರುವುದರಿಂದ ಅದು ಕೃಷಿ ಭೂಮಿ ಆಗಲು ಹೇಗೆ ಸಾಧ್ಯ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.

ದೇವರಾಜು ಪರವಾಗಿ ವಕೀಲ ಆದಿತ್ಯ ನಾರಾಯಣ್‌ ಅವರು ವಕಾಲತ್ತು ಹಾಕಿದ್ದಾರೆ.

Kannada Bar & Bench
kannada.barandbench.com