ವಕೀಲರ ಸಮ್ಮೇಳನದ ಹಣ ದುರ್ಬಳಕೆ ಆರೋಪ: ಕೆಎಸ್‌ಬಿಸಿ ಅಧ್ಯಕ್ಷ ವಿಶಾಲ್‌ ರಘು ವಿರುದ್ಧದ ತನಿಖೆ‌ಗೆ ಹೈಕೋರ್ಟ್‌ ತಡೆ

ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿದ ದೂರಿನ ತನಿಖೆಗಾಗಿ ಮೂವರು ಸದಸ್ಯರ ಸಮಿತಿ ರಚಿಸಿ ಬಿಸಿಐ ಮಾಡಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆಯಾಜ್ಞೆ ವಿಧಿಸಿದೆ.
KSBC
KSBC

ಮೈಸೂರಿನಲ್ಲಿ ಕಳೆದ ವರ್ಷ ಜರುಗಿದ ರಾಜ್ಯ ವಕೀಲರ ಸಮ್ಮೇಳನದ ವೇಳೆ ಹಣಕಾಸು ದುರ್ಬಳಕೆ ನಡೆದಿದ್ದು, ₹50 ಲಕ್ಷಕ್ಕೂ ಹೆಚ್ಚಿನ ಮೊತ್ತದ ದುರುಪಯೋಗ ನಡೆದಿದೆ ಎಂದು ಆರೋಪಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷರ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಇದೇ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ರಚಿಸಿರುವ ಮೂವರು ಸದಸ್ಯರ ಸಮಿತಿಗೂ ಹೈಕೋರ್ಟ್‌ನ ಮತ್ತೊಂದು ಪೀಠ ತಡೆ ವಿಧಿಸಿದೆ.

ತಮ್ಮ ವಿರುದ್ದದ ತನಿಖೆ ವಜಾ ಮಾಡುವಂತೆ ಕೋರಿ ಕೆಎಸ್‌ಬಿಸಿ ಅಧ್ಯಕ್ಷ ಎಚ್‌ ಎಲ್‌ ವಿಶಾಲ್‌ ರಘು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಪೀಠ ನಡೆಸಿತು.

“ಅರ್ಜಿದಾರ ವಿಶಾಲ್‌ ರಘು ಕೋರಿಕೆಯಂತೆ ಪ್ರಕರಣಕ್ಕೆ ತಡೆಯಾಜ್ಞೆ ವಿಧಿಸಲಾಗಿದೆ. ಎರಡನೇ ಪ್ರತಿವಾದಿಯು ಆಕ್ಷೇಪಣೆ ಸಲ್ಲಿಸಿ, ಆದೇಶದಲ್ಲಿ ಮಾರ್ಪಾಡಿಗೆ ಕೋರಬಹುದಾಗಿದೆ. ರಾಜ್ಯ ಸರ್ಕಾರದ ಪರವಾಗಿ ಎಚ್‌ಸಿಜಿಪಿ ನೋಟಿಸ್‌ ಪಡೆದಿದ್ದಾರೆ” ಎಂದು ನ್ಯಾಯಾಲಯ ಆದೇಶಿಸಿದೆ.

KSBC Chairman Vishal Raghu H L and Vice Chairman Vinay Mangalekar
KSBC Chairman Vishal Raghu H L and Vice Chairman Vinay Mangalekar

ದೂರಿನ ವಿವರ: ರಾಜ್ಯ ವಕೀಲರ ಪರಿಷತ್‌ ವತಿಯಿಂದ ಮೈಸೂರಿನಲ್ಲಿ 2023ರ ಆಗಸ್ಟ್‌ 12 ಮತ್ತು 13ರಂದು ಎರಡು ದಿನಗಳ ಕಾಲ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಿತ್ತು. ಈ ಸಮಯದಲ್ಲಿ ಸಮ್ಮೇಳನದ ಪ್ರತಿನಿಧಿ ವಕೀಲರಿಂದ ತಲಾ ₹1 ಸಾವಿರದಂತೆ ಒಟ್ಟು ₹1,16,33,000 ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ರಾಜ್ಯ ಸರ್ಕಾರ ₹1.8 ಲಕ್ಷ ಅನುದಾನ ನೀಡಿತ್ತು ಮತ್ತು ರಾಜ್ಯ ವಕೀಲರ ಪರಿಷತ್‌ನಿಂದ ₹75 ಲಕ್ಷ ಬಿಡುಗಡೆಯಾಗಿತ್ತು. ಒಟ್ಟು ಮೊತ್ತ ₹3,30,33,000 ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್‌ ಖಾತೆಗೆ ಜಮೆ ಆಗಿದ್ದು, ಈ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‌ನ ₹50 ಲಕ್ಷ ಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿ, ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂಪಾಯಿಯನ್ನು, ನಕಲಿ ಬಿಲ್‌ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಜಿಎಸ್‌ಟಿ ಹಣವನ್ನು ಸಲ್ಲಿಸದೇ ಮೋಸ ಮಾಡುವ ಉದ್ದೇಶದಿಂದ ಪರಿಷತ್ತಿನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ಬಸವರಾಜ್‌ ಆರೋಪಿಸಿದ್ದಾರೆ.

ಬಿಸಿಐನ ಮೂವರು ಸದಸ್ಯರ ಸಮಿತಿ ನೇಮಕಕ್ಕೆ ತಡೆ

ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿದ ದೂರಿನ ತನಿಖೆಗಾಗಿ ಮೂವರು ಸದಸ್ಯರ ಸಮಿತಿ ರಚಿಸಿ ಬಿಸಿಐ ಮಾಡಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆಯಾಜ್ಞೆ ವಿಧಿಸಿದೆ.

ಹಿರಿಯ ವಕೀಲ ಎಸ್‌ ಬಸವರಾಜು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಏಪ್ರಿಲ್‌ 12ರಂದು ಬಿಸಿಐ ಪ್ರಕರಣದ ತನಿಖೆಗಾಗಿ ಮೂವರು ಸಮಿತಿ ರಚಿಸಿ ಆದೇಶಿಸಿರುವುದು ಮತ್ತು ಮುಂದಿನ ಪ್ರಕ್ರಿಯೆಗೆ ತಡೆ ನೀಡಿದೆ. ಅಲ್ಲದೇ ಪ್ರತಿವಾದಿಗಳಾದ ಬಿಸಿಐ, ಕೆಎಸ್‌ಬಿಸಿ ಅಧ್ಯಕ್ಷ ಎಚ್‌ ಎಲ್ ವಿಶಾಲ್‌ ರಘು‌ ಮತ್ತು ಉಪಾಧ್ಯಕ್ಷ ವಿನಯ್‌ ಮಂಗಳೇಕರ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

KSBC Member and Senior Advocate Basavaraju S
KSBC Member and Senior Advocate Basavaraju S

ಕೆಎಸ್‌ಬಿಸಿ ಮಾಜಿ ಅಧ್ಯಕ್ಷ ಆನಂದ್‌ ಕುಮಾರ್‌ ಮಗದುಮ್‌ ಅವರು ಏಪ್ರಿಲ್‌ 5ರಂದು ನೀಡಿದ ದೂರನ್ನು ಆಧರಿಸಿ ಬಿಸಿಐ ಹಿರಿಯ ವಕೀಲ ಅಪೂರ್ಬ ಕುಮಾರ್‌ ಶರ್ಮಾ ನೇತೃತ್ವದಲ್ಲಿ ಮೂವರ ಸಮಿತಿ ರಚಿಸಿದ್ದು, ಆರೋಪದ ತನಿಖೆ ಮಾಡುವಂತೆ ಆದೇಶಿಸಿತ್ತು. ಅಮಿತ್‌ ವೇದ್‌ ಮತ್ತು ಭಕ್ತ ಭೂಷಣ್‌ ಬರೀಕ್‌ ಸಮಿತಿಯ ಮತ್ತಿಬ್ಬರು ಸದಸ್ಯರಾಗಿದ್ದಾರೆ.

ಮೈಸೂರಿನ ವಕೀಲರ ಸಮಾವೇಶಕ್ಕೆ ಸಂಬಂಧಿಸಿದ ಖರ್ಚು-ವೆಚ್ಚದ ದಾಖಲೆಗಳನ್ನು ಸಲ್ಲಿಸುವಂತೆ ಕೆಎಸ್‌ಬಿಸಿ ಕಾರ್ಯದರ್ಶಿಗೆ ಬಿಸಿಐ ಸೂಚಿಸಿತ್ತು. ತನಿಖೆ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಸ್‌ಬಿಸಿ ಸದಸ್ಯರು ಮತ್ತು ವಕೀಲರು ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧಿಸಿ ಆದೇಶಿಸಿದೆ.

Kannada Bar & Bench
kannada.barandbench.com