ಸಿಎ ನಿವೇಶನ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ: ಪಿಐಎಲ್‌ ಸಲ್ಲಿಸಲು ಸೂಚಿಸಿ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್‌

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಸಿಎ ನಿವೇಶನಗಳನ್ನು ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡುತ್ತಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
Karnataka High Court
Karnataka High Court
Published on

ಸಾರ್ವಜನಿಕರ ಬಳಕೆಗಾಗಿ ಮೀಸಲಿಟ್ಟು ಅಭಿವೃದ್ಧಿಪಡಿಸಲಾದ ಸಿಎ ನಿವೇಶನಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಿಲೇವಾರಿ ಮಾಡಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ಪರಿಶೀಲಿಸಿದ ಪೀಠವು “ಇದೊಂದು ಸಾರ್ವಜನಿಕ ಹಿತಾಸಕ್ತಿ ವಿಚಾರವಾಗಿದೆ. ಅರ್ಜಿದಾರರಿಗೆ ವೈಯಕ್ತಿಕ ಸಮಸ್ಯೆ ಏನಾಗಿದೆ. ಪರಿಹಾರ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು” ಎಂದು ಹೇಳಿತು. ಅದಕ್ಕೆ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು ಅರ್ಜಿದಾರರು ಓರ್ವ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿದರು. ಅದಕ್ಕೆ ಪೀಠವು “ಬಹಳ ಒಳ್ಳೆಯದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಸಮಾಜ ಸೇವೆ ಮಾಡಲಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರು” ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ಕೆಐಎಡಿಬಿ ಸಿಎ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾಗಿರುವ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Kannada Bar & Bench
kannada.barandbench.com